(ನ್ಯೂಸ್ ಮಲ್ನಾಡ್ ವರದಿ)ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಮ್ಮ ಕ್ಲಿನಿಕ್ ಯೋಜನೆಗೆ ಇಂದು ರಾಜ್ಯಾದ್ಯಂತ ಏಕಕಾಲದಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಹ ಇದಕ್ಕೆ ಚಾಲನೆ ದೊರಕಿದೆ, ಮೊದಲನೇ ಹಂತವಾಗಿ ಚಿಕ್ಕಮಗಳೂರು, ತರೀಕೆರೆ, ಕಡೂರು, ಬೀರೂರು ಭಾಗದಲ್ಲಿ ನಾಲ್ಕು ಕ್ಲಿನಿಕ್ ತೆರೆಯಲಾಗಿದೆ.
ಸೋಮವಾರದಿಂದ ಶನಿವಾರದ ವರೆಗೆ ಬೆಳಿಗ್ಗೆ 9ರಿಂದ ಸಂಜೆ 4.30ರ ವರೆಗೆ ಸೇವೆಗಳು ಲಭ್ಯವಾಗಲಿದೆ.
ನಿರ್ಲಕ್ಷ್ಯಕ್ಕೆ ಒಳಗಾದ ತಾಲ್ಲೂಕುಗಳು:
ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ, ಕಳಸ ತಾಲೂಕುಗಳಲ್ಲಿ ಯಾವುದೇ ತಾಲೂಕಿಗೆ ಈ ಸೌಲಭ್ಯ ನೀಡಲಾಗಿಲ್ಲ, ಹೆಚ್ಚು ಹಳ್ಳಿಗಾಡಿನ ಪ್ರದೇಶಗಳಾದ ಈ ಊರುಗಳಿಗೆ ಇದರ ಅನಿವಾರ್ಯತೆ ಹೆಚ್ಚಿತ್ತು ಆದರೆ ಕೇವಲ ಒಂದೇ ಭಾಗದ ಊರುಗಳಿಗೆ ನೀಡಿ ಈ ಊರುಗಳಿನ ಜನರಿಗೆ ಸೌಲಭ್ಯ ವಂಚಿತರನ್ನಾಗಿಸಲಾಗಿದೆ.
ಈ ಹಿಂದೆ ಮೆಡಿಕಲ್ ಕಾಲೇಜು, ಡೈರಿ ಕೇಂದ್ರ, ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಸಹ ಜಿಲ್ಲೆಯ ಮಧ್ಯಭಾಗದಲ್ಲಿ ಮಾಡುವ ಗೋಜಿಗೆ ಸಹ ಹೋಗಿಲ್ಲ, ಹಾಗೆಯೇ ಈ ಭಾಗಗಳ ಯಾವುದೇ ರಾಜಕೀಯ ನಾಯಕರುಗಳು ಅದನ್ನು ಕೇಳುವ ಕಾರ್ಯವನ್ನೂ ಸಹ ಮಾಡಿಲ್ಲ, ಅಷ್ಟೇ ಅಲ್ಲದೇ ಅತಿಹೆಚ್ಚು ಮೀಸಲು ಅರಣ್ಯ ಭೂಮಿ ಹೊಂದಿರುವ ಶೃಂಗೇರಿ, ಕೊಪ್ಪ, ಮೂಡಿಗೆರೆ , ನರಸಿಂಹರಾಜಪುರ ಭಾಗದಲ್ಲಿ ಇರಬೇಕಾದ ಸೆಕ್ಷನ್ 4 ಕಛೇರಿಯನ್ನು ಕಡೂರಿನಲ್ಲಿ ಸ್ಥಾಪಿಸಲಾಗಿದೆ. ಇದರಿಂದಾಗಿ ಅಧಿಕಾರಿಗಳನ್ನು ಸಂಪರ್ಕಿಸಲು ರೈತರು 130 ಕಿಲೋಮೀಟರ್ ದೂರ ಕ್ರಮಿಸಬೇಕಾಗಿದೆ.
ನಮ್ಮ ಕ್ಲಿನಿಕ್ ಸೇವೆಗಳು.
ನಮ್ಮ ಕ್ಲಿನಿಕ್ ನಲ್ಲಿ ಒಟ್ಟು 12 ರೀತಿಯ ನಾನಾ ಆರೋಗ್ಯ ಸೇವೆಗಳು ಲಭ್ಯವಾಗಲಿದ್ದು. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ, ಬಾಲ್ಯ ಮತ್ತು ಹದಿಹರೆಯದವರಿಗೆ ಸೇವೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮಾನಸಿಕ ಆರೋಗ್ಯ ಸಂಬಂಧಿಸಿದ ಚಿಕಿತ್ಸೆ ಲಭ್ಯವಿರಲಿದೆ. ವೃದ್ಧಾಪ್ಯ ಆರೈಕೆ , ಪ್ರಯೋಗಾಲಯ ಸೇವೆ, ತುರ್ತು ವೈದ್ಯಕೀಯ ಸೇವೆಗಳು, ಮಾಸಿಕ ಆರೋಗ್ಯ ತಪಾಸಣೆ, ಔಷಧಿಗಳು ಸೇರಿದಂತೆ ಹಲವಾರು ಇತರೆ ಸೇವೆಗಳು ಲಭ್ಯವಾಗಲಿದೆ