Sunday, June 4, 2023
Homeಇತರೆಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲು ವಿಳಂಬ, ಪಿಡಿಒಗೆ 25 ಸಾವಿರ

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ನೀಡಲು ವಿಳಂಬ, ಪಿಡಿಒಗೆ 25 ಸಾವಿರ

ಮಾಹಿತಿ ಹಕ್ಕು ಕಾಯ್ದೆಯಡಿ ವಕೀಲರೊಬ್ಬರು ಕೋರಿದ್ದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ಒದಗಿಸಲು ವಿಫಲವಾಗಿದ್ದಲ್ಲದೆ, ಅರ್ಜಿಯಲ್ಲಿ ಕೋರಲಾದ ಮಾಹಿತಿ ಬೇರೊಂದು ಪ್ರಾಧಿಕಾರಕ್ಕೆ ಸಂಬಂಧಿಸಿದ್ದು ಅಲ್ಲಿಯೇ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯುವಂತೆ ಹಿಂಬರಹ ನೀಡಿದ್ದ ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ರಾಜ್ಯ ಮಾಹಿತಿ ಆಯೋಗವು 25 ಸಾವಿರ ರೂ. ದಂಡ ವಿಧಿಸಿದೆ.

ಬಿಇಒ ಕಚೇರಿಯ ವ್ಯವಸ್ಥಾಪಕರೂ ಅದ ಸಾರ್ವಜನಿಕ ಮಾಹಿತಿ ಅಧಿಕಾರಿ ರಘುನಾಥನ್ ಹಾಗೂ ಅವರಿಂದ ಮಾಹಿತಿ ಕೊಡಿಸಲು ವಿಫಲವಾಗಿದ್ದ ಪ್ರಥಮ ಮೇಲ್ಮನವಿ ಪ್ರಾಧಿಕಾರದ ವಿರುದ್ಧ ಮೈಸೂರಿನ ಕನ್ನೇಗೌಡನಕೊಪ್ಪಲಿನ ವಕೀಲ ಸಾ.ತಿ, ಸದಾನಂದಗೌಡ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಎಚ್ ಸಿ. ಸತ್ಯನ್ ಈ ಆದೇಶ ಮಾಡಿದ್ದಾರೆ.

ಕಾರಣ:

ಸದಾನಂದ ಗೌಡ 2020ರ ಡಿಸೆಂಬರ್.4 ರಂದು ಮಾಹಿತಿ ಹಕ್ಕು ಅಧಿನಿಯಮ 2005ರ ಸೆಕ್ಷನ್ 6(1)ರ ಅನ್ವಯ ಅರ್ಜಿ ಸಲ್ಲಿಸಿ, ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಬಾರತೀಯ ವಿಧ್ಯಾ ಭವನದಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಎಲ್ಲ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವಿವರಗಳ ದೃಢೀಕೃತ ಪ್ರತಿಗಳನ್ನು ನೀಡುವಂತೆ ಕೋರಿದ್ದರು.

ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದ ಕಾರಣ 2021ರ ಜನವರಿ.5 ರಂದು ಪ್ರಥಮ ಮೇಲ್ಮನವಿ ಪ್ರಾಧಿಕಾರಿಯಾದ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಥಮ ಮೇಲ್ಮನವಿ ಪ್ರಾಧಿಕಾರವೂ ಮಾಹಿತಿ ಕೊಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಆರ್‌ಟಿಐ ಕಾಯ್ದೆಯ ಸೆಕ್ಷನ್ 19(3) ರ ಅನ್ವಯ 2021ರ ಮಾರ್ಚ್.30 ರಂದು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಆಕ್ಷೇಪ:

ಮೇಲ್ಮನವಿದಾರರು 2020ರ ಡಿಸೆಂರ್.4 ರಂದು ಮಾಹಿತಿ ಕೋರಿ ಪ್ರತಿವಾದಿ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ನಿಯಮಾನುಸಾರ 30 ದಿನಗಳ ಒಳಗೆ ಮಾಹಿತಿ ಒದಗಿಸಬೇಕಿತ್ತು. ಒಂದು ವೇಳೆ, ಕೋರಲಾದ ಮಾಹಿತಿ ಬೇರೆ ಯಾವುದಾದರೂ ಸಾರ್ವಜನಿಕ ಪ್ರಾಧಿಕಾರದ ಬಳಿ ಲಭ್ಯವಿದ್ದರೆ ಆರ್‌ಟಿಐ ಅಧಿನಿಯಮ 2005 ರ ಸೆಕ್ಷನ್ 6(3)ರ ಅಡಿಯಲ್ಲಿ ನಿಯಮಾನುಸಾರ 5 ದಿನಗಳ ಒಳಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರ್ಗಾಯಿಸಿ, ಆ ಬಗ್ಗೆ ಮೇಲ್ಮನವಿದಾರರಿಗೆ ತಿಳಿಸಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಸಿಗದಿತ ಅವಧಿ ಮುಗಿದ ಬಳಿಕ 2021ರ ಜನವರಿ.18 ರಂದು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿ, ಹಿಂಬರಹ ನೀಡಲಾಗಿದೆ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿ, ಹಿಂಬರಹವನ್ನು ತಿರಸ್ಕರಿಸಿತ್ತು.

ಸಮಜಾಯಿಷಿ ಕೇಳಿದ್ದ ಸಾರ್ವಜನಿಕ ಮಾಹಿತಿ ಅಧಿಕಾರಿ ರಘುನಾಥನ್:

ಅರ್ಜಿಯಲ್ಲಿ ಕೋರಲಾಗಿರುವ ಮಾಹಿತಿ ನಮ್ಮ ಕಚೇರಿ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಹಾಗೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ಶಾಲೆಯು ಉತ್ತರ ವಲಯದ ಬಿಇಒ ಕಚೇರಿಗೆ ವ್ಯಾಪ್ತಿಗೆ ಬರಲಿದ್ದು, ಅಲ್ಲಿಯೇ ನೇರವಾಗಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಹಿಂಬರಹ ನೀಡಿದ್ದಾರೆ.

ಮಾಹಿತಿ ಕೋರಿ 665 ದಿನಗಳಿಗೂ ಅಧಿಕ ಸಮಯವಾಗಿದ್ದರೂ ಮಾಹಿತಿ ಒದಗಿಸಿಲ್ಲ. ಮೇಲ್ಮನವಿದಾರರು ಮಾಹಿತಿ ಆಯೋಗದ ಮೆಟ್ಟಿಲೇರಿದ ಬಳಿಕ, ಆಯೋಗ ನೋಟಿಸ್ ನೀಡಿದ್ದರಿಂದ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ತರಿಸಿಕೊಂಡು, 2022ರ ನವೆಂಬರ್.23 ರಂದು ಮೇಲ್ಮನವಿದಾರರಿಗೆ ಒದಗಿಸಲಾಗಿದೆ. ಉದ್ದೇಶಪೂರ್ವಕವಾಗಿ ಮಾಹಿತಿ ಒದಗಿಸಲು ವಿಳಂಬ ಮಾಡಿರುವುದರಿಂದ, ಮಾಹಿತಿ ಹಕ್ಕು ಅಧಿನಿಯಮದ ಸೆಕ್ಷನ್ 20(1)ರ ಅಡಿಯಲ್ಲಿ 25 ಸಾವಿರ ರೂ. ದಂಡವನ್ನು ಏಕೆ ವಿಧಿಸಬಾರದು ಎಂಬುದಕ್ಕೆ ಸಮಜಾಯಿಷಿ ನೀಡುವಂತೆ ರಘುನಾಥನ್‌ಗೆ ನಿರ್ದೇಶಿಸಿತ್ತು.

ನಿರ್ಲಕ್ಷ್ಯ ಧೋರಣೆಗೆ ದಂಡ:

ಆಯೋಗದ ಆದೇಶದಂತೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಾಹಿತಿ ತರಿಸಿಕೊಂಡು ಮೇಲ್ಮನವಿದಾರರಿಗೆ ಒದಗಿಸಿದ್ದ ರಘುನಾಥನ್, ತಮ್ಮ ವಿರುದ್ಧ ದಂಡದ ಕ್ರಮ ಜರುಗಿಸದ ಬಗ್ಗೆ ಯಾವುದೇ ಲಿಖಿತ ಸಮಜಾಯಿಷಿ ಸಲ್ಲಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ದಂಡ ವಿಧಿಸುವ ಎಚ್ಚರಿಕೆ ನೀಡಿದ ಬಳಿಕ ಮೈಸೂರು ದಕ್ಷಿಣ ವಲಯದ ಬಿಇಒ ಕಚೇರಿಯ ಪಿಐಒ ರಘುನಾಥನ್ ಮೇಲ್ಮನವಿದಾರರಿಗೆ ಮಾಹಿತಿ ಒದಗಿಸಿದ್ದಾರೆ. ದಂಡ ವಿಧಿಸುವ ವಿಚಾರದಲ್ಲಿ ಯಾವುದೇ ಲಿಖಿತ ಸಮಜಾಯಿಷಿಯನ್ನೂ ನೀಡಿಲ್ಲ. ಆದ್ದರಿಂದ, ಅವರು ದಂಡನೆಗೆ ಅರ್ಹರಾಗಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದೆ. ಪ್ರಕರಣದಲ್ಲಿ ನಿಯಮಾನುಸಾರ ಮಾಹಿತಿ ಒದಗಿಸದೆ, ನಿರ್ಲಕ್ಷ್ಯ ಧೋರಣೆ ತೋರಲಾಗಿದೆ. ರಘುನಾಥನ್ ಅವರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಏಕ ಕಂತಿನಲ್ಲಿ ಅಥವಾ ಅವರ ಮಾಸಿಕ ವೇತನದಲ್ಲಿ 12,500ರೂ.ಗಳಂತೆ 2 ಕಂತುಗಳಲ್ಲಿ ಒಟ್ಟು 25ಸಾವಿರ ರೂ. ಕಡಿತಗೊಳಿಸಬೇಕು. ಈ ಮೊತ್ತವನ್ನು ಸರ್ಕಾರದ ಖಾತೆಗೆ ಜಮೆ ಮಾಡಿ, ರಸೀದಿಯೊಂದಿಗೆ ವರದಿ ಸಲ್ಲಿಸಬೇಕು ಎಂದು ಪ್ರಥಮ ಮೇಲ್ಮನವಿ ಪ್ರಾಧಿಕಾರಿಯಾದ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಯೋಗ ನಿರ್ದೇಶಿಸಿದೆ.

Most Popular

Recent Comments