(ನ್ಯೂಸ್ ಮಲ್ನಾಡ್ ವರದಿ)ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಬಗೆಯ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಪ್ರಚಾರ ಮಾಡುವ ‘ಸೋಷಿಯಲ್ ಇನ್‌ಫ್ಲುಯೆನ್ಸರ್’ಗಳು, ಇನ್ನು ಮುಂದೆ ಇಂತಹ ಪ್ರಚಾರದಿಂದ ತಮಗೆ ದೊರೆಯುವ ಪ್ರಯೋಜನ ಅಥವಾ ಲಾಭದ ಬಗ್ಗೆಯೂ ಜನರಿಗೆ ಕಡ್ಡಾಯವಾಗಿ ತಿಳಿಸಬೇಕು. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಮತ್ತು ಜಾಹೀರಾತುಗಳ ಮೂಲಕ ಜನರ ಹಾದಿ ತಪ್ಪಿಸುವುದನ್ನು ತಡೆಯಲು ಕೇಂದ್ರ ಸರಕಾರ ಮುಂದಾಗಿದ್ದು, ಜಾಲತಾಣ ಇನ್‌ಫ್ಲುಯೆನ್ಸರ್‌ಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳು ಹಾಗೂ ಯೂಟ್ಯೂಬ್‌ಗಳಲ್ಲಿ ಇನ್‌ಫ್ಲುಯೆನ್ಸರ್‌ಗಳು ವಿವಿಧ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಫಾಲೋವರ್ಸ್ಗೆ ಮಾಹಿತಿ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ ವಿವಿಧ ಬ್ರಾಂಡ್‌ಗಳಿಂದ ಪ್ರಯೋಜನ ಪಡೆಯುತ್ತಾರೆ.
ಹಣದ ರೂಪದಲ್ಲಿ ಅಥವಾ ಉಚಿತವಾಗಿ ಉತ್ಪನ್ನ/ಸೇವೆಗಳನ್ನು ಪಡೆಯುವ ಮೂಲಕ ಅವರು ಅನುಕೂಲ ಪಡೆಯುತ್ತಾರೆ. ಹೆಚ್ಚು ಫಾಲೊವರ್ಸ್ ಇದ್ದಷ್ಟೂ ಅವರು ಪಡೆಯುವ ಲಾಭ ಹೆಚ್ಚಾಗಿರುತ್ತದೆ. ಆದರೆ, ಅವರು ಪಡೆಯುವ ಲಾಭ/ಪ್ರಯೋಜನವನ್ನು ಸಾಮಾನ್ಯವಾಗಿ ಗೌಪ್ಯವಾಗಿರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಜನರು ಪ್ರಚಾರಕರನ್ನು ನಂಬಿ ಮೋಸ ಹೋಗುವುದನ್ನು ತಡೆಯಲು ಗ್ರಾಹಕರ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿಗಳನ್ನು ರೂಪಿಸಿದೆ. ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿಗಳು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಪ್ರಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಮಾರ್ಗಸೂಚಿಯನ್ನು ಹೊರಡಿಸಿದ್ದು ಈ ಮಾರ್ಗಸೂಚಿಯನ್ನು ಉಲ್ಲಂಘಿಸುವವರಿಗೆ 10 ಲಕ್ಷದಿಂದ 50 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.
ಇನ್‌ಫ್ಲುಯೆನ್ಸರ್‌ಗಳು ಮತ್ತು ಗಣ್ಯರು ಉತ್ಪನ್ನಗಳು ಹಾಗೂ ಸೇವೆಗಳ ಬಗ್ಗೆ ನೀಡುವ ಪ್ರಚಾರದಿಂದ ಗ್ರಾಹಕರಿಗೆ ಆಗುವ ಸಂಭಾವ್ಯ ವಂಚನೆಯನ್ನು ತಡೆಯಲು ಈ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. ಇದನ್ನು ಉಲ್ಲಂಘಿಸುವವರು ಗ್ರಾಹಕ ಹಕ್ಕುಗಳ ರಕ್ಷಣಾ ಕಾಯ್ದೆ ಅಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ. ಇನ್‌ಫ್ಲುಯೆನ್ಸರ್‌ಗಳ ಪ್ರಚಾರದಿಂದ ತಮಗೆ ವಂಚನೆಯಾಗಿದೆ ಎಂದು ಸಾಮಾಜಿಕ ಜಾಲತಾಣ ವೀಕ್ಷಕರು ಅಥವಾ ಫಾಲೋವರ್‌ಗಳು ಭಾವಿಸಿದರೆ ಕಾನೂನು ಕ್ರಮಕ್ಕೆ ಮುಂದಾಗಬಹುದು ಎಂದು ಅವರು ಹೇಳಿದ್ದಾರೆ.
ಮಾರ್ಗಸೂಚಿಗಳು:
▪️ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್‌ಗಳು, ಗಣ್ಯರು ಮತ್ತು ಕಂಪ್ಯೂಟರ್ ಮೂಲಕ ಸೃಷ್ಟಿಸಲಾದ ಅವತಾರ್ ರೂಪದ ಇನ್‌ಫ್ಲುಯೆನ್ನರ್‌ಗಳಿಗೆ ಈ ಮಾರ್ಗಸೂಚಿಗಳು ಅನ್ವಯವಾಗುತ್ತದೆ.
▪️ಉತ್ಪನ್ನ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ನೀಡಲಾಗುವ ಮಾಹಿತಿಗಳಿಗೆ ಸೂಕ್ತ ಆಧಾರವಿರಬೇಕು. ಉತ್ಪನ್ನ ಮತ್ತು ಸೇವೆಗಳನ್ನು ತಾವು ಸ್ವತಃ ಬಳಸದೆಯೇ, ಪ್ರಚಾರ ನೀಡಬಾರದು.
▪️ಪ್ರಚಾರದ ಸ್ವರೂಪವನ್ನು ಇನ್‌ಫ್ಲುಯೆನ್ಸರ್‌ಗಳು ಬಹಿರಂಗಪಡಿಸಬೇಕು. ತಮ್ಮ ಪೋಸ್ಟ್ಗಳಲ್ಲಿ ನೀಡುತ್ತಿರುವ ಪ್ರಚಾರವು ‘ಜಾಹೀರಾತು’ ಅಥವಾ ‘ಪ್ರಾಯೋಜಿತ’ ಎಂಬ ಬ್ಯಾಡ್ಜ್ ಅನ್ನು ಎದ್ದುಕಾಣುವ ರೀತಿಯಲ್ಲಿ ಹಾಕಿರಬೇಕು.
▪️ಉತ್ಪನ್ನ ಮತ್ತು ಸೇವೆಯನ್ನು ಒದಗಿಸುತ್ತಿರುವ ಕಂಪನಿಯ ಜತೆಗೆ ತಮಗಿರುವ ಸಂಬಂಧ ಏನು ಎಂಬುದನ್ನು ಬಹಿರಂಗಪಡಿಸಬೇಕು. ಕಂಪನಿಯಿಂದ ತಾವು ಹಣ ಪಡೆದಿದ್ದೇವೆಯೇ, ಉತ್ಪನ್ನವನ್ನು ಉಚಿತವಾಗಿ ಪ್ರವಾಸದ ಪ್ಯಾಕೇಜ್ ಪಡೆದಿದ್ದೇವೆಯೇ ಅಥವಾ ಯಾವುದೇ ರೀತಿಯ ಅನುಕೂಲ ಪಡೆದಿದ್ದೇವೆಯೇ ಎಂಬುದನ್ನು ಬಹಿರಂಗ ಪಡಿಸಬೇಕು.