ನವದೆಹಲಿ: ಭಾರತದಲ್ಲಿ ಅಕ್ಟೋಬರ್ ನಿಂದ ಕೊರೊನಾ ಮೂರನೇ ಅಲೆ (Covid-19 3rd Wave) ಶುರುವಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ತಜ್ಞರು ಕೇಂದ್ರ ಸರ್ಕಾರಕ್ಕೆ ವರದಿಯನ್ನು ನೀಡಿದ್ದಾರೆ. ಈ ಮೂರನೇ ಅಲೆ ವಯಸ್ಕರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಹೀಗಾಗಿ, ಮುಂದಾಗುವ ಅಪಾಯವನ್ನು ನಿಯಂತ್ರಿಸುವ ಸಲುವಾಗಿ ಈಗಾಗಲೇ ಮಕ್ಕಳಿಗೂ ಕೊರೊನಾ ಲಸಿಕೆಗಳನ್ನು(Covid Vaccine for Children) ಕಂಡುಹಿಡಿಯಲಾಗಿದೆ. ಈ ನಡುವೆ ಇತರೆ ಆರೋಗ್ಯ ಸಮಸ್ಯೆಗಳಿರುವ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಆದ್ಯತೆಯ ಮೇರೆಗೆ ಮೊದಲು ಕೊವಿಡ್ ಲಸಿಕೆ ನೀಡಲಾಗುವುದು ಎಂದು ರಾಷ್ಟ್ರೀಯ ರೋಗನಿರೋಧಕ ತಾಂತ್ರಿಕ ಸಲಹಾ ತಂಡದ (NTAGI) ಸರ್ಕಾರಿ ಸಲಹಾ ಸಮಿತಿ ತಿಳಿಸಿದೆ.
ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ಲಭ್ಯವಾಗಲಿದೆ. ಅದು ಯಶಸ್ವಿಯಾದರೆ ಸೆಪ್ಟೆಂಬರ್ ವೇಳೆಗೆ ಪ್ರತಿ ತಿಂಗಳಿಗೆ 10 ಕೋಟಿ ಕೊವ್ಯಾಕ್ಸಿನ್ ಡೋಸ್‌ಗಳನ್ನು ಉತ್ಪಾದಿಸಲಾಗುವುದು ಎಂದು ಎನ್‌ಟಿಎಜಿಐ ಮುಖ್ಯಸ್ಥ ಎನ್‌ಕೆ ಅರೋರ ಹೇಳಿದ್ದಾರೆ.
ಈಗಾಗಲೇ ಭಾರತ ಮೂಲದ ಜೈಡಸ್ ಕ್ಯಾಡಿಲಾ ಕಂಪನಿಯು ಜೈಕೋವ್-ಡಿ ಎಂಬ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಈ ಲಸಿಕೆಯ ತುರ್ತು ಬಳಕೆಗೆ ಅನುಮತಿಯನ್ನು ನೀಡಲಾಗಿದೆ. ಜೈಕೋವ್-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ನೀಡಬಹುದು. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್‌ನಲ್ಲಿ ಈ ಲಸಿಕೆ ಲಭ್ಯವಾಗಲಿದೆ. ಸೆಪ್ಟೆಂಬರ್‌ನಿoದ ಮಕ್ಕಳಿಗೆ ಕೋವಿಡ್ ಲಸಿಕೆ ಸಿಗುವ ಸಾಧ್ಯತೆ ಇದೆ. ಇದು ಭಾರತದಲ್ಲಿ ಲಭ್ಯವಾಗುತ್ತಿರುವ 6 ನೇ ಕೊವಿಡ್ ಲಸಿಕೆಯಾಗಿದೆ.
ಜೈಕೋವ್-ಡಿ ಕೊರೊನಾ ಲಸಿಕೆಗೆ ಎಷ್ಟು ಹಣ ನಿಗದಿಪಡಿಸಲಾಗುವುದು ಎಂಬ ವಿಷಯದ ಬಗ್ಗೆ ಸೆಪ್ಟೆಂಬರ್ ನಲ್ಲಿ ಕಂಪನಿ ಮಾಹಿತಿ ನೀಡಲಿದೆ.12 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಈ ಜೈಕೋವ್-ಡಿ ಲಸಿಕೆ ಬಹಳ ಪರಿಣಾಮಕಾರಿಯಾಗಲಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಈ ಲಸಿಕೆಗಳನ್ನು ಮಾರುಕಟ್ಟೆಗೆ ಬಿಡಲಾಗುವುದು. ಮುಂದಿನ ವರ್ಷ ಆಗಸ್ಟ್ ವೇಳೆಗೆ ಪ್ರತಿ ತಿಂಗಳು 5 ಕೋಟಿ ಜೈಕೋವ್-ಡಿ ಲಸಿಕೆಗಳನ್ನು ಉತ್ಪಾದನೆ ಮಾಡಲಾಗುತ್ತದೆ.
ಭಾರತ ಮೂಲಕ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್‌ಗೆ ಈಗಾಗಲೇ ಅನುಮತಿ ಸಿಕ್ಕಿದೆ ಹಾಗೂ ಎಲ್ಲೆಡೆ ವಿತರಣೆ ಮಾಡಲಾಗುತ್ತಿದೆ. ಅದರ ಬಳಿಕ ಭಾರತ ಮೂಲದ ಎರಡನೇ ಕೊವಿಡ್ ಲಸಿಕೆಯೆಂಬ ಹೆಗ್ಗಳಿಕೆಗೆ ಜೈಕೋವ್-ಡಿ ಲಸಿಕೆ ಪಾತ್ರವಾಗಿದೆ. 3 ಡೋಸ್‌ಗಳ ಈ ಜೈಕೊವ್-ಡಿ ಲಸಿಕೆಯ ಕುರಿತು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಸಮಿತಿಯು ಸೂಚಿಸಿದೆ. ಈ ಲಸಿಕೆ 12 ರಿಂದ 18 ವರ್ಷದೊಳಗಿನ ಮಕ್ಕಳಿಗೂ ಅತ್ಯಂತ ಸುರಕ್ಷಿತವಾಗಿದೆ ಎಂದು ಸಂಸ್ಥೆ ಮಾಹಿತಿಯನ್ನು ನೀಡಿದೆ.
12 ವರ್ಷ ಮೇಲ್ಪಟ್ಟವರಿಗೆ ಮಾತ್ರವಲ್ಲದೆ 2 ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಪ್ರಯೋಗಗಳು ಕೂಡ ನಡೆಯುತ್ತಿವೆ.2 ರಿಂದ 18 ವರ್ಷ ವಯಸ್ಸಿನವರಿಗೆ 2 ರಿಂದ 3 ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಈ ಲಸಿಕಾ ಪ್ರಯೋಗದ ಫಲಿತಾಂಶಗಳು ಶೀಘ್ರದಲ್ಲೇ ಲಭ್ಯವಾಗುತ್ತವೆ ಎಂದು ತಿಳಿಸಿದ್ದಾರೆ.