ಕಡೂರು: (ನ್ಯೂಸ್ ಮಲ್ನಾಡ್ ವರದಿ) ಪ್ರೇಮಿ ಜೊತೆಯಿರಲು ಅಡ್ಡಗಾಲಾಗುತ್ತಿದ್ದ ಪತಿಯನ್ನು ಪ್ರೇಮಿ ಜೊತೆ ಸೇರಿ ಪತ್ನಿಯೇ ಕೊಲೆ ಮಾಡಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ನವೀನ್ (28) ಪತ್ನಿಯ ಕಳ್ಳಾಟಕ್ಕೆ ಬಲಿಯಾದ ಪತಿ. ಪತ್ನಿ ಪಾವನ ಹಾಗೂ ಆಕೆಯ ಪ್ರೇಮಿ ಸಂಜಯ್ ಕೊಲೆ ಮಾಡಿದ ಆರೋಪಿಗಳು ಎಂದು ತಿಳಿದು ಬಂದಿದೆ.
ನವೀನ್ ಅವರ ಮೃತದೇಹ ಆಗಸ್ಟ್ 6ರಂದು ಯಗಟಿ ಕೆರೆ ಬಳಿ ಪತ್ತೆಯಾಗಿತ್ತು. ಇದು ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನವೀನ್ ಪೋಷಕರು ನೀಡಿದ ದೂರಿನ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರಿಗೆ ಪತ್ನಿಯೇ ಪತಿಯನ್ನು ಕೊಂದಿರುವುದಾಗಿ ತನಿಖೆಯಲ್ಲಿ ಪಾವನ ಹಾಗೂ ಸಂಜಯ್ ಬಾಯ್ಬಿಟ್ಟಿದ್ದಾರೆ.
ಪ್ರೇಮಿ ಜೊತೆಗೂಡಿ ಮಾಸ್ಟರ್ ಪ್ಲಾನ್
ಪ್ರೇಮಿ ಜೊತೆ ಇರಲು ಅಡ್ಡಗಾಲಾಗುತ್ತಿದ್ದ ಪತಿಗೆ ಪಾವನ ಪ್ಲಾನ್ ಒಂದನ್ನು ರೆಡಿ ಮಾಡಿದ್ಲು. ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಪತಿಯ ಜ್ಞಾನ ತಪ್ಪಿಸಿದ್ದಾಳೆ. ಬಳಿಕ ಪತಿಯನ್ನು ಪ್ರೇಮಿಯ ಜೊತೆ ಸೇರಿ ಬೈಕ್ ನಲ್ಲಿ ತಂದು ಕೆರೆಗೆ ಎಸೆದಿದ್ದರು ಎನ್ನಲಾಗಿದೆ. ಇನ್ನಷ್ಟು ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.