ಚಿಕ್ಕಮಗಳೂರು (ನ್ಯೂಸ್ ಮಲ್ನಾಡ್ ವರದಿ) ಮುಂಗಾರು ಆರಂಭವಾದಾಗಿನಿಂದಲೂ ದಕ್ಷಿಣ ಕನ್ನದ ಜಿಲ್ಲೆಯ ಭಾಗದಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ. ಆದರೆ ಇದೀಗ ರಾಜ್ಯದ ಬಹುತೇಕ ಕಡೆ ಮುಂಗಾರು ಚುರಕು ಪಡೆದಿದ್ದು, ಇಂದು ಕಳಸ, ಶೃಂಗೇರಿ, ಜಯಪುರ, ಕೊಪ್ಪ ಸೇರೆದಂತೆ ಚಿಕ್ಕಮಗಳೂರಿನ ಮಲೆನಾಡು ಭಾಗದ ಧಾರಾಕಾರ ಮಳೆ ಸುರಿಯುತ್ತಿದೆ.
ಚಾರ್ಮಾಡಿ ಘಾಟ್ ನಲ್ಲಿ ಫುಲ್ ಮಿಸ್ಟ್
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನೋಡಲು ಪ್ರವಾಸಿಗರು ಕಿಕ್ಕಿರಿದು ಆಗಮಿಸಿದ್ದಾರೆ. ಆದರೆ ಚಾರ್ಮಾಡಿ ಘಾಟ್ನಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ವಾಹನ ಚಾಲನೆ ಮಾಡಲು ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಅತಿಯಾದ ಮಂಜು ಇದ್ದ ಪರಿಣಾಮ ಎರಡು ಸರ್ಕಾರಿ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿದ್ದವು. ವಾಹನ ಸವಾರರು ಸ್ವಲ್ಪ ಮೈಮರೆತರೂ ಅಪಾಯ ತಂದೊಡ್ಡುವ ಪರಿಸ್ಥಿತಿ ಚಾರ್ಮಾಡಿಯಲ್ಲಿ ನಿರ್ಮಾಣವಾಗಿದೆ.
ನೇತ್ರಾವತ ನದಿಯಲ್ಲಿ ಆಯತಪ್ಪಿ ಬಿದ್ದು ವೃದ್ಧೆ ಸಾವು
ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ನದಿಗೆ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ದೇವಮ್ಮ (61) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ದೇವಮ್ಮ ಗದ್ದೆಗೆ ತೆರಳುವಾಗ ದಾರದಹಳ್ಳಿ ಸಮೀಪ ಇರುವ ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದಿದ್ದಾರೆ. ಧಾರಾಕಾರ ಮಳೆಯಿಂದ ತುಂಬಿ ಹರಿಯುತ್ತಿದ್ದ ನೀರಿನ ರಭಸಕ್ಕೆ ದೇವಮ್ಮ ಕೊಚ್ಚಿಹೋಗಿದ್ದಾರೆ.
ಬಳಿಕ ತೇಲಿ ಬರುತ್ತಿದ್ದ ಶವವನ್ನು ನೇತ್ರಾವತಿ ನದಿಯ ದಡದಲ್ಲಿ ಸ್ಥಳೀಯರು ಹಾಗೂ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮೇಲಕ್ಕೆತ್ತಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.
ಶೃಂಗೇರಿಯಲ್ಲಿ ಚಲಿಸುತ್ತಿರುವ ಲಾರಿ ಮೇಲೆ ಬಿದ್ದ ಮರ
ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಶೃಂಗೇರಿ ತಾಲ್ಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಕೆರೆಕಟ್ಟೆ ಚೆಕ್ ಪೋಸ್ಟ್ ಸಮೀಪ ಚಲಿಸುತ್ತಿದ್ದ ಲಾರಿ ಮೇಲೆ ಮರವೊಂದು ಬಿದ್ದ ಪರಿಣಾಮ ಲಾರಿ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಮರ ಬಿದ್ದ ಪಕ್ಕದಲ್ಲಿಯೇ ಲೈಟ್ ಕಂಬ ಇದ್ದು, ಕರೆಂಟ್ ಕಡಿತಗೊಂಡಿದ್ದರಿಂದ ಬಾರಿ ಅನಾಹುತವೊಂದು ತಪ್ಪಿದೆ.
ಮಳೆಗೆ ಕುಸಿದ ಮನೆ ಪಕ್ಕದ ತಡೆಗೋಡೆ; ಆತಂಕದಲ್ಲಿ ಕುಟುಂಬ
ಕಳಸ ತಾಲೂಕಿನ ಓಣಿಗಂಡಿಯ ಡೊಂಗ್ರೆ ಅವರ ಮನೆಯ ಪಕ್ಕದ ತಡೆಗೋಡೆ ನಿರಂತರ ಮಳೆಯಿಂದ ಕುಸಿದಿದ್ದು, ಮನೆಯ ಪಕ್ಕದಲ್ಲಿ ಭೂಮಿ ನಿಧಾನವಾಗಿ ಬಿರುಕು ಬಿಡುತ್ತಿದೆ. ಸ್ಥಳಕ್ಕೆ ಕಳಸ ಗ್ರಾಮ ಪಂಚಾಯಿತ್ ಸದಸ್ಯರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮಣ್ಣು ಜರಿದ ಜಾಗಕ್ಕೆ ಟಾರ್ಪಲ್ ಮುಚ್ಚಲಾಗಿದೆ. ಇನ್ನು ಎರಡು ಅಡಿ ಮಣ್ಣು ಜರುಗಿದರೆ ಮನೆ ಕುಸಿಯುವ ಭೀತಿ ಎದುರಾಗಿದೆ.
ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? – 19-07-2023
ಕೊಪ್ಪ ತಾಲ್ಲೂಕು
ಕೊಪ್ಪ – 80.0mm
ಹರಿಹರಪುರ – 76.0mm
ಜಯಪುರ – 49.2mm
ಬಸರಿಕಟ್ಟೆ – 30.4mm
ಕಮ್ಮರಡಿ – 92.8mm
ನರಸಿಂಹರಾಜಪುರ ತಾಲ್ಲೂಕು
ನರಸಿಂಹರಾಜಪುರ – 26.2mm
ಬಾಳೆಹೊನ್ನೂರು – 25.8mm
ಮೂಡಿಗೆರೆ ತಾಲ್ಲೂಕು
ಮೂಡಿಗೆರೆ – 11.8mm
ಕೊಟ್ಟಿಗೆಹಾರ – 36.0mm
ಗೋಣಿಬೀಡು 8.1mm
ಹಾವಳಿ – 26.0mm
ಹೊಸಕೆರೆ – 80.0mm
ಬಿಳ್ಳೂರು 32.2mm
ಕಳಸ ತಾಲ್ಲೂಕು
ಕಳಸ – 33.0mm
ಹಿರೇಬೈಲು – 30.0mm
ಶೃಂಗೇರಿ ತಾಲ್ಲೂಕು
ಶೃಂಗೇರಿ – 67.4mm
ಕಿಗ್ಗಾ – 121.2mm
ಕೆರೆಕಟ್ಟೆ – 140.0mm