ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್ ತನ್ನ ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕೈ ಟಿಕೆಟ್ ಅನ್ನು ಹೆಚ್ ಡಿ ತಮ್ಮಯ್ಯಗೆ ಘೋಷಿಸಿದೆ.
ಕಾಂಗ್ರೆಸ್ ಬಿಡುಗಡೆಗೊಳಿಸಿದ ಎರಡೂ ಪಟ್ಟಿಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಬಾಕಿ ಉಳಿಸಿಕೊಂಡಿತ್ತು. ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಸಿ. ಟಿ ರವಿ ಆಪ್ತ ಹೆಚ್ ಡಿ ತಮ್ಮಯ್ಯ ಟಿಕೆಟ್ ರೇಸ್ ನಲ್ಲಿದ್ದರು. ಈ ಹಿಂದೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಿ. ಹೆಚ್ ಹರೀಶ್ ಕಳೆದ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ಬಾರಿಯ ಕೈ ಟಿಕೆಟ್ ನ ಪ್ರಭಲ ಆಕಾಂಕ್ಷಿಯಾಗಿದ್ದರು. ಆದರೆ ಬಿ ಹೆಚ್ ಹರೀಶ್ ಗೆ ಕೈ ಟಿಕೆಟ್ ಮಿಸ್ಸಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕಾಂಗ್ರೆಸ್ಗೆ ಜಗದೀಶ್ ಶೆಟ್ಟರ್ ಸಿಎಂ ಅಭ್ಯರ್ಥಿ ಎಂದು ಘೋಷಿಸುವ ತಾಕತ್ತು ಇದ್ಯಾ? ಸಿ.ಟಿ.ರವಿ ಸವಾಲು
- ತರೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಗೆ ಬಂಡಾಯದ ಬಿಸಿ
- ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಮನೆ ಕಳ್ಳತನದ ಆರೋಪಿ ಬಂಧನ
ಸಾಲು ಸಾಲು ಸಭೆ ಸೇರಿದ್ದ ಕಾಂಗ್ರೆಸ್ ನಾಯಕರು
ಈ ಹಿಂದೆಯಿಂದಲೂ ಹೆಚ್ ಡಿ ತಮ್ಮಯ್ಯ ಹಾಗೂ ಬಿ ಹೆಚ್ ಹರೀಶ್ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಇತ್ತು. ಕಾಂಗ್ರೆಸ್ ಚಿಕ್ಕಮಗಳೂರಿನ ಟಿಕೆಟ್ ಅನ್ನು ತಮ್ಮಯ್ಯಗೆ ನೀಡುವ ಸುಳಿವು ನೀಡಿತ್ತು. ಹೀಗಾಗಿ ಬಿ ಹೆಚ್ ಹರೀಶ್ ಸೇರಿದಂಗೆ 5ಕ್ಕೂ ಹೆಚ್ಚು ಜನ ಟಿಕೆಟ್ ಆಕಾಂಕ್ಷಿಗಳು ಸಾಲು ಸಾಲು ಸಭೆ ಕರೆದು ಒಂದು ವೇಳೆ ತಮ್ಮಯ್ಯಗೆ ಟಿಕೆಟ್ ನೀಡುವುದಕ್ಕೆ ನಮ್ಮ ವಿರೋಧವಿದ್ದು. ಮೂಲ ಕಾಂಗ್ರೆಸ್ಸಿಗರಿಗೇ ಟಿಕೆಟ್ ನೀಡಬೇಕು. ಹೆಚ್ ಡಿ ತಮ್ಮಯ್ಯ ಕಾಂಗ್ರೆಸ್ ಸೇರಿರುವುದೇ ಸಿಟಿ ರವಿ ಗೆಲ್ಲಿಸಲು ಎಂದು ಬಹಿರಂಗ ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದರು. ಆದರೂ ಅಂತಿಮವಾಗಿ ಕಾಂಗ್ರೆಸ್ ಹೆಚ್ ಡಿ ತಮ್ಮಯ್ಯಗೆ ಟಿಕೆಟ್ ಘೋಷಿಸಿದೆ. ಡಿ ಕೆ ಶಿವಕುಮಾರ್ ಶೃಂಗೇರಿ ಭೇಟಿ ಸಂದರ್ಭ ತಮ್ಮಯ್ಯ ಬೆಂಬಲಿಗರು ಈ ಬಾರಿಯ ಚಿಕ್ಕಮಗಳೂರು ಟಿಕೆಟ್ ತಮ್ಮಯ್ಯ ಅವರಿಗೆ ನೀಡಿದಲ್ಲಿ ಅತೀ ಹೆಚ್ಚು ಅಂತರದಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಮನವಿ ಮಾಡಿದ್ದರು.
ಹಿಂದೆ ಆಪ್ತಮಿತ್ರರು.. ಈಗ ಪ್ರತಿಸ್ಪರ್ಧಿಗಳು
ಕಳೆದ ಕೆಲ ತಿಂಗಳುಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಹೆಚ್ ಡಿ ತಮ್ಮಯ್ಯ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಪ್ತರು. ಹತ್ತಾರು ವರ್ಷದಿಂದ ಒಟ್ಟಿಗೆ ಕೆಲಸ ಮಾಡಿದವರು ಆದರೆ ಈಗ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರೂ ಪ್ರತಿಸ್ಪರ್ಧಿಗಳು. ಹೆಚ್ ಡಿ ತಮ್ಮಯ್ಯ ಲಿಂಗಾಯಿತ ಸಮುದಾಯಕ್ಕೆ ಸೇರಿದವರು. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯಿತರ ಮತಗಳು ನಿರ್ಣಾಯಕವಾಗಿದ್ದು ಹೆಚ್ ಡಿ ತಮ್ಮಯ್ಯ ಸ್ಪರ್ಧೆ ಯಾವ ರೀತಿ ಸಿ ಟಿ ರವಿ ಅವರಿಗೆ ಎಫೆಕ್ಟ್ ಮಾಡಲಿದೆ ಎನ್ನೋದನ್ನು ಕಾದುನೋಡಬೇಕಿದೆ.
ಬಿ ಹೆಚ್ ಹರೀಶ್ ಬಂಡಾಯ ಸಾಧ್ಯತೆ
ಪ್ರಾರಂಭದಿಂದಲೂ ಬಿ ಹೆಚ್ ಹರೀಶ್ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ ಹೆಚ್ ಡಿ ತಮ್ಮಯ್ಯಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಿ ಹೆಚ್ ಹರೀಶ್ ಬಂಡಾಯ ಏಳುವ ಸಾಧ್ಯತೆಗಳಿವೆ. ಇತ್ತೀಚಿಗೆ ನಡೆದ ಸಭೆಯಲ್ಲಿ ಕೂಡ ಹರೀಶ್ ಬೆಂಬಲಿಗರು ಒಂದು ವೇಳೆ ಹರೀಶ್ ಅವರಿಗೆ ಟಿಕೆಟ್ ಸಿಗದಿದ್ದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ ಎಂಬ ಮಾತುಗಳು ಕೇಳಿಬಂದಿದ್ದವು. ಬಿ ಹೆಚ್ ಹರೀಶ್ ಕೂಡ ಲಿಂಗಾಯಿತ ಸಮುದಾಯಕ್ಕೆ ಸೇರಿರುವುದರಿಂದ ಬಂಡಾಯ ಸ್ಪರ್ಧೆ ಮಾಡಿದಲ್ಲಿ ಕಾಂಗ್ರೆಸ್ ಗೆ ಮತ್ತೊಂದು ತಲೆನೋವು ಆಗಲಿವೆ. ಇತ್ತೀಚಿಗೆ ತರೀಕೆರೆಯಲ್ಲಿ ಶ್ರೀನಿವಾಸ್ ಗೆ ಟಿಕೆಟ್ ನೀಡಿದ ಬೆನ್ನಲ್ಲೇ ಗೋಪಿಕೃಷ್ಣ ಕೂಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ.