Sunday, October 1, 2023
Homeರಾಜ್ಯಭೀಕರ ರಸ್ತೆ ಅಪಘಾತ : 7 ಮಂದಿ ದುರ್ಮರಣ

ಭೀಕರ ರಸ್ತೆ ಅಪಘಾತ : 7 ಮಂದಿ ದುರ್ಮರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ದುರ್ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮೃತರದಲ್ಲಿ ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದ್ದಾರೆ. ಎಲ್ಲರೂ 20 ರಿಂದ 30 ವರ್ಷದೊಳಗಿನ ಯುವಕ-ಯುವತಿಯರಾಗಿದ್ದಾರೆ. ಅತಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಕಳೆದ ಮಧ್ಯರಾತ್ರಿ ಆಡಿ ಕ್ಯೂ3 ಕಾರು ಫುಟ್ ಪಾತ್ ಮೇಲಿದ್ದ ಬೀದಿ ದೀಪ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆಯು ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಆಡಿ ಕಾರು ಕಂಬಕ್ಕೆ ಅಪ್ಪಳಿಸಿ ಸ್ಥಳದಲ್ಲಿಯೇ ಕಾರಿನಲ್ಲಿದ್ದ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ಕರುಣಾಸಾಗರ, ಬಿಂದು, ಇಶಿತಾ, ಡಾ ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಎಂದು ಗುರುತಿಸಲಾಗಿದೆ. ನಗರದ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತರಿಗೆ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಮೃತಪಟ್ಟವರೆಲ್ಲರು ತಮಿಳು ನಾಡು ಮೂಲದವರಾಗಿದ್ದು ಬೆಂಗಳೂರಿಗೆ ಕೆಲಸದ ನಿಮಿತ್ತ ಬಂದಿದ್ದರು ಎಂದು ತಿಳಿದುಬಂದಿದೆ. ಅವರಲ್ಲೊಬ್ಬ ಮೃತ ಕರುಣಾಸಾಗರ್ ಹೊಸೂರಿನ ಡಿಎಂಕೆ ಶಾಸಕ ವೈ.ಪ್ರಕಾಶ್ ಪುತ್ರ ಮತ್ತು ಅವರು ಮದುವೆಯಾಗಬೇಕಿದ್ದ ಯುವತಿ ಬಿಂದು ಸಹ ಒಳಗೊಂಡಿದ್ದಾರೆ.

ನಿನ್ನೆ ಸಾಯಂಕಾಲ ಬೆಂಗಳೂರಿಗೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಖರೀದಿಸಲು ಕರುಣಾಸಾಗರ್ ತಮ್ಮ ಆಡಿ ಕಾರಿನಲ್ಲಿ ಬಂದಿದ್ದರು. ಬೆಂಗಳೂರು-ತಮಿಳು ನಾಡು ಮಧ್ಯೆ ಬ್ಯುಸ್ ನೆಸ್ ಸಂಬoಧ ಆಗಾಗ ಬಂದು ಹೋಗುತ್ತಿದ್ದರು. ಅವರು ಬೆಂಗಳೂರಿಗೆ ಬರುವಾಗ ತಮ್ಮ ಭಾವಿ ಪತ್ನಿ ಬಿಂದು ಮತ್ತು ಸ್ನೇಹಿತರನ್ನು ಕರೆದುಕೊಂಡು ಬಂದಿದ್ದರು. ಹಿಂತಿರುಗಿ ಹೋಗುವಾಗ ಮಧ್ಯರಾತ್ರಿಯಾಗಿತ್ತು. ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದಿರುವುದೇ ಈ ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಅಪಘಾತದ ತೀವ್ರತೆಗೆ ಆಡಿ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನಂತರ ಗೋಡೆಗೆ ಢಿಕ್ಕಿ ಹೊಡೆದು ನಿಂತಿದೆ. ಒಳಗಿದ್ದವರ ಕೈ ಕಾಲು ಮುರಿದು ಹೋಗಿತ್ತು. ಕಾರು ನುಜ್ಜುಗುಜ್ಜಾಗಿ ಕಾರಿನ ಚಕ್ರ ದೂರ ಹೋಗಿ ಬಿದ್ದಿತ್ತು. ಅಪಘಾತದ ಶಬ್ದ ತೀವ್ರವಾಗಿ ಕೇಳಿಬಂದು ಪಕ್ಕದಲ್ಲಿದ್ದ ನಿವಾಸಿಗಳಿಗೆ ಮಧ್ಯರಾತ್ರಿ ಎಚ್ಚರವಾಗಿ ಬಂದು ನೋಡುವಾಗ ನಿಜಕ್ಕೂ ದೃಶ್ಯ ಭೀಕರವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ಸೂಕ್ತ ಮಾಹಿತಿ ನೀಡುವುದಾಗಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

Most Popular

Recent Comments