ಬೆಂಗಳೂರು: ರಾಜಭವನದಿಂದ ಬೆಳಗ್ಗೆ11.30 ರ ಒಳಗೆ ನೂತನ ಸಚಿವರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಮಾಧ್ಯಮಗಳಲ್ಲಿ ಸಂಭಾವ್ಯ ಸಚಿವರ ಹೆಸರುಗಳು ಕೇಳಿಬರುತ್ತಿವೆ. ಹೀಗಾಗಿ ನಾನು ಈಗ ಹೇಳುವುದಿಲ್ಲ. ರಾಜಭವನದಿಂದಲೇ ಸಚಿವರ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನೂತನ ಸಚಿವರ ಪಟ್ಟಿಯನ್ನು ರಾಜಭವನಕ್ಕೆ 11 ಗಂಟೆಯ ಹೊತ್ತಿಗೆ ನೀಡಲಾಗುತ್ತದೆ. ಬಳಿಕ ಕೆಲವೇ ಕ್ಷಣಗಳಲ್ಲಿ ರಾಜಭವನದಿಂದ ಅಧಿಕೃತ ಪಟ್ಟಿ ಹೊರಬೀಳಲಿದೆ. ಅಪರಾಹ್ನ 2-15 ಕ್ಕೆ ನೂತನ ಸಚಿವರ ಪ್ರಮಾಣ ವಚನ ರಾಜಭವನದ ಗಾಜಿನ ಮನೆಯಲ್ಲಿ ನೆರವೇರಲಿದೆ ಎಂದರು.
ನoತರ ವಿಧಾನಸೌಧದ ಮುಂದೆ ಸುದ್ದಿಗಾರರ ಮುಂದೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಒಂದೆರಡು ವಿಷಯಗಳನ್ನು 11 ಗಂಟೆಗೆ ಎಲ್ಲರಿಗೂ ತಿಳಿಸುತ್ತೇನೆ. 11 ಗಂಟೆಯ ವೇಳೆಗೆ ಶುಭ ಸುದ್ದಿಗಳು ಹೊರಬೀಳಲಿದೆ ಎಂದರು.
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಆರ್.ಅಶೋಕ್, ಶ್ರೀರಾಮುಲು, ಅಂಗಾರ, ಪೂರ್ಣಿಮಾ ಶ್ರೀನಿವಾಸ್, ಉಮೇಶ್ ಕತ್ತಿ, ಡಾ ಸುಧಾಕರ್, ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್, ಕೆ ಎಸ್ ಈಶ್ವರಪ್ಪಪ್ಪ, ಲಿಂಬಾವಳಿ, ಸೋಮಣ್ಣ, ಗೋವಿಂದ ಕಾರಜೋಳ, ಮಾಧುಸ್ವಾಮಿ, ಆನಂದ್ ಸಿಂಗ್, ಬಿ.ಸಿ ಪಾಟೀಲ್, ಅಶ್ವಥನಾರಾಯಣ್, ಬೈರತಿ ಬಸವರಾಜ್, ಮುರುಗೇಶ್ ನಿರಾಣಿ, ಗೋಪಾಲಯ್ಯ, ಅರಗ ಜ್ಞಾನೇಂದ್ರ, ಸುನಿಲ್ ಕುಮಾರ್ ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಈಗಾಗಲೇ ಇವರೆಲ್ಲರಿಗೂ ವಿಧಾನಸೌಧಕ್ಕೆ ಆಗಮಿಸುವಂತೆ ಮುಖ್ಯಮಂತ್ರಿಗಳು ಕರೆ ಮಾಡಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿ ಪಿ ಯೋಗೇಶ್ವರ್, ಅರವಿಂದ ಬೆಲ್ಲದ್, ಶಶಿಕಲಾ ಜೊಲ್ಲೆ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಚಿವ ಸ್ಥಾನ ಸಿಗುವುದು ಸಂಶಯವಾಗಿದೆ.