ತುಮಕೂರು: ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯ ವಿಳಂಬವಾಗಿರುವುದಕ್ಕೆ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಮಗಾರಿಗಳು ನಿಧಾನವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
‘ಕಟ್ಟಡ ಕಟ್ಟುತ್ತಿರೊ ಇಲ್ಲವೊ ಗೊತ್ತಿಲ್ಲ. ಹಣವನ್ನು ತಿಂದು ಹಾಕುವ ಕೆಲಸವನ್ನಾದರೂ ಮಾಡಿ’ ಎಂದು ಎಂಜಿನಿಯರ್ ಗಳ ಮೇಲೆ ಚಾಟಿ ಬೀಸಿದರು.
‘ಹಣ ನೀಡಿದ್ದರೂ ಕಳೆದ ಮೂರು ವರ್ಷಗಳಿಂದಲೂ ಶಾಲಾ ಕಟ್ಟಡ ಕಟ್ಟುತ್ತಲೇ ಇದ್ದೀರಿ. ಕೋವಿಡ್ ಸಮಯದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕೆಲಸ ಪೂರ್ಣಗೊಳಿಸಿಲ್ಲ. ನಿಮಗೆ ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಜಡ್ಡುಗಟ್ಟಿ ಹೋಗಿರುವ ಅಧಿಕಾರಿಗಳಿಗೆ ಏನು ಹೇಳಿದರೂ ಪ್ರಯೋಜನವಿಲ್ಲ. ಇನ್ನು ಮುಂದೆ ಜಿ.ಪಂ ಎಂಜಿನಿಯರಿಂಗ್ ವಿಭಾಗದವರಿಗೆ ಕೆಲಸವನ್ನು ಕೊಡಬೇಡಿ. ಸಂಬಂಧಿಸಿದವರನ್ನು ಅಮಾನತುಮಾಡಿ. ಆಗಲೇ ಇವರಿಗೆ ಬುದ್ದಿ ಬರುವುದು’ ಎಂದು ಜಿ.ಪಂ ಸಿಇಒಗೆ ಸೂಚಿನೆಯನ್ನು ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಅನೇಕ ವಿವಿಧ ಅಭಿವೃದ್ಧಿ ನಿಗಮಗಳ ವ್ಯಾಪ್ತಿಯಲ್ಲಿ ಸಮುದಾಯ ಭವನ, ಹಾಸ್ಟೆಲ್, ಇತರೆ ಕಟ್ಟಡಗಳ ನಿರ್ಮಾಣದಲ್ಲಿಯೂ ‘ಕ್ರೈಸ್’ ಸಂಸ್ಥೆ ತಡ ಮಾಡಿರುವುದಕ್ಕೆ ತರಾಟೆಗೆ ತೆಗೆದುಕೊಂಡರು. 2017-18ನೇ ಸಾಲಿನಿಂದ ಈವರೆಗೆ ಜಿಲ್ಲೆಯಲ್ಲಿ ಸುಮಾರು 150 ವಿವಿಧ ಭವನಗಳನ್ನು ನಿರ್ಮಿಸಲು ಬಾಕಿ ಇದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಭವನಗಳನ್ನು ಕಟ್ಟದೆ ಏನು ಮಾಡುತ್ತಾ ಇದ್ದೀರಿ ಇವರಿಗೆ ಎಷ್ಟು ಹೇಳಿದರೂ ಕೆಲಸ ಮಾಡುತ್ತಿಲ್ಲ. ಇವರ ಮೇಲೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಕೆಯನ್ನು ನೀಡಿದರು.