ಕಲಬುರಗಿ: ಒಂದೂವರೆ ವರ್ಷದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಸ್ಥಾನಕ್ಕೆ ಇಬ್ಬರು ನಾಯಕರು ಬರುವುದು ನೂರಕ್ಕೆ ನೂರು ಸತ್ಯ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಬುಧವಾರ ಕಲಬುರಗಿಯಲ್ಲಿ ಮಾತನಾಡಿದ ಅವರು ಜನವರಿ ಮುಗಿಯುವುದರೊಳಗೆ ಸಿಎಂ ಬಸವರಾಜ ಬೊಮ್ಮಾಯಿಯವರ ಸ್ಥಾನ ಹೋಗುತ್ತದೆ, ಈ ವಿಷಯದ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ದೊರೆತಿದೆ, ಇನ್ನೂ ಒಂದೂವರೆ ವರ್ಷದಲ್ಲಿ ರಾಜ್ಯಕ್ಕೆ ಇಬ್ಬರು ನಾಯಕರು ಸಿಎಂ ಆಗುತ್ತಾರೆ ಎಂದರು.
ಕಾಂಗ್ರೆಸ್ ಮಾಜಿಸಚಿವ ಪ್ರಿಯಾಂಕ ಖರ್ಗೆ ಬಿಟ್ ಕಾಯಿನ್ ಹಗರಣದ ಬಗ್ಗೆ ಸಮಗ್ರವಾಗಿ ಪಾರದರ್ಶಕವಾಗಿ ತನಿಖೆಯನ್ನು ನಡೆಸಿದರೆ ಸಿಎಂ ಪದವಿಯನ್ನು ಕಳೆದುಕೊಳ್ಳುತ್ತಾರೆ ಈ ಹಗರಣದಲ್ಲಿ ಅನೇಕ ಬಿಜೆಪಿ ನಾಯಕರು, ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಅವರ ಹೇಳಿಕೆಯ ಮುಂದಿನ ಭಾಗವಾಗಿ ಶಿವರಾಜ್ ತಂಗಡಗಿ ಸದ್ಯದಲ್ಲಿಯೇ ಮುಖ್ಯಮಂತ್ರಿ ಬದಲಾವಣೆ ನೂರಕ್ಕೆ ನೂರು ಸತ್ಯ, ಇನ್ನು ಒಂದೂವರೆ ವರ್ಷದ ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳಾಗುತ್ತಾರೆ.
ಈ ಹಿಂದಿನ ವರ್ಷದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮೂವರು ಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯವರಿಗೆ ವರ್ಷದಲ್ಲಿ ಒಬ್ಬರೇ ಸಿಎಂ ಆಗಿ ಆಡಳಿತವನ್ನು ಮಾಡಲು ಆಗುವುದೇ ಇಲ್ಲ, ಅಧಿಕಾರಕ್ಕೆ ಬೇಕಾಗುವ ಅಷ್ಟು ಸಾಮರ್ಥ್ಯ ಬಿಜೆಪಿ ನಾಯಕರಿಗಿಲ್ಲ ಎಂದರು.
ವಿರೋಧ ಪಕ್ಷದವರು ಬಿಟ್ ಕಾಯಿನ್ ಹಗರಣದ ಬಗ್ಗೆ ಮಾತನಾಡಿದರೆ, ಆರೋಪ ಮಾಡಿದರೆ ಸಾಕ್ಷ್ಯಾಧಾರ ಕೊಡಿ, ದಾಖಲೆಯನ್ನು ತೋರಿಸಿ ಎಂದು ಕೇಳುತ್ತಾರೆ, ಆರೋಪ ಮಾಡುವವರು ದಾಖಲೆ ಕೊಡಬೇಕೆಂದರೆ ಸರ್ಕಾರವಿರುವುದು ಏಕೆ? ತನಿಖಾ ಸಂಸ್ಥೆಗಳಿರುವುದೇಕೆ? ಎಂದು ಬಿಜೆಪಿಯವರನ್ನು ತಂಗಡಗಿ ಪ್ರಶ್ನಿಸಿದರು.