Sunday, June 4, 2023
Homeರಾಜಕೀಯರಾಜ್ಯ ಬಿಜೆಪಿಯಲ್ಲಿ ನಡೆದ ಖಾತೆ ಹಂಚಿಕೆಯಲ್ಲಿ ಅತೃಪ್ತಗೊಂಡ ಸಚಿವರ ಮನವೊಲಿಕೆಗೆ ಮುಂದಾದ ಕೇಂದ್ರದ ನಾಯಕರು;

ರಾಜ್ಯ ಬಿಜೆಪಿಯಲ್ಲಿ ನಡೆದ ಖಾತೆ ಹಂಚಿಕೆಯಲ್ಲಿ ಅತೃಪ್ತಗೊಂಡ ಸಚಿವರ ಮನವೊಲಿಕೆಗೆ ಮುಂದಾದ ಕೇಂದ್ರದ ನಾಯಕರು;

ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ಹಾಗೂ ಸೂಕ್ತ ಖಾತೆ ಸಿಗದೆ ಬೇಸರಗೊಂಡಿರುವ ನಾಯಕರ ಮನವೊಲಿಸಲು ಹಾಗೂ ಸಮಾಧಾನಪಡಿಸಲು ಇದೀಗ ಕೇಂದ್ರೀಯ ನಾಯಕತ್ವವೇ ಮುಂದೆ ಬಂದಿದೆ.

ಖಾತೆ ಹಂಚಿಕೆ ಕುರಿತು ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಗದ್ದಲದ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು, 2-3 ನಾಯಕರಿಗೆ ಖಾತೆ ಹಂಚಿಕೆ ತೃಪ್ತಿ ತಂದಿಲ್ಲ. ಹೀಗಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಆನಂದ್ ಸಿಂಗ್ ರವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಮಾತುಕತೆ ಬಳಿಕ ಸಮಾಧಾನಗೊಂಡಿದ್ದಾರೆ. ಎಂಟಿಬಿ ನಾಗರಾಜ್ ಅವರು ಹೇಳಿಕೆಗಳನ್ನು ನೀಡಿದ್ದಾರೆ. ತೃಪ್ತಿ ಹೊಂದಿಲ್ಲದ ಪ್ರತಿಯೊಬ್ಬ ಸದಸ್ಯರ ಜೊತೆಗೂ ಮಾತುಕತೆಯನ್ನು ನಡೆಸುತ್ತಿದ್ದೇನೆ. ೨೦೨೩ರ ಚುನಾವಣೆ ಸಮಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ ಎಂಬುದನ್ನು ನಾನು ತಿಳಿಸಿದ್ದೇನೆಂದು ಹೇಳಿದ್ದಾರೆ.

ಇದೇ ವೇಳೆ ಸಾರ್ವಜನಿಕವಾಗಿ ಅಸಮಾಧಾನ ಹೊರಹಾಕುವವದನ್ನು ಪಕ್ಷದ ಹೈಕಮಾಂಡ್ ಒಪ್ಪುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ ಅರುಣ್ ಸಿಂಗ್ ಅವರು, ಹಂಚಿಕೆಯಾದ ಖಾತೆಗಳ ವಿಚಾರ ಬಿಟ್ಟು, 2023 ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಲು ಆರಂಭಿಸಬೇಕು ಎಂದು ತಿಳಿಸಿದರು.

ಕೆಲಸಗಳಿಗೆ ಅನುದಾನ ಕೇಳುವ ಬದಲು, ಶಾಸಕರು ಸರ್ಕಾರದ ಯೋಜನೆಗಳು ಜನಪ್ರಿಯವಾಗಿದೆಯೇ ಮತ್ತು ಜನರಿಗೆ ತಲುಪಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.

ಕೆಲ ಸಚಿವರು ಶಾಸಕರು ಹಾಗೂ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಲು ವಾರದಲ್ಲಿ ಒಂದು ದಿನವನ್ನು ಮೀಸಲಿಡುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ಬದಲಿಸುವುದಕ್ಕೂ ಮುನ್ನ ಈ ರೀತಿಯ ನಿರ್ಧಾರವನ್ನು ನಮ್ಮ ಪಕ್ಷ ಕೈಗೊಂಡಿತ್ತು. ಇದೀಗ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ ಮುಖ್ಯಮಂತ್ರಿಗಳ ಆಯ್ಕೆಯಿಂದ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯವರೆಗೆ ಎಲ್ಲಾ ನಿರ್ಧಾರವನ್ನೂ ಕೇಂದ್ರದ ನಾಯಕರು ಕೈಗೊಳ್ಳುತ್ತಾರೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿದ ಅವರು, ಈ ಆರೋಪಗಳೆಲ್ಲಾ ತಪ್ಪಾದದ್ದು. ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿಗಳೇ ನಿರ್ಧಾರ ಕೈಗೊಳ್ಳುತ್ತಾರೆ. ಅದು ಅವರ ಪರಮಾಧಿಕಾರವಾಗಿದೆ. ಈ ಬಗ್ಗೆ ಕೇಂದ್ರ ನಾಯಕತ್ವದಿಂದ ಮಾರ್ಗದರ್ಶನ ಪಡೆಯುತ್ತಾರೆಂದು ಸ್ಪಷ್ಟಪಡಿಸಿದ್ದಾರೆ.

Most Popular

Recent Comments