ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಅಖಾಡ ರಂಗೇರಿದ್ದು, ಕಾಂಚಾಣದ ಸದ್ದು ಜೋರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ವೋಟಿಗಾಗಿ ಬಿಜೆಪಿ ನಾಯಕರು ಹಣದ ಹೊಳೆಯನ್ನೇ ಹರಿಸಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಯನ್ನು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಗೆಲ್ಲಲು ಹಣದ ಹೊಳೆ ಹರಿಸಿದ್ದಾರೆ. ಒಂದು ವೋಟಿಗಾಗಿ 2 ಸಾವಿರ ರೂಪಾಯಿ ಕೊಡುತ್ತಿರುವುದಾಗಿ ಮಾಹಿತಿ ಬಂದಿದೆ ಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಈ ರೀತಿಯಾಗಿ ಮಾಡುತ್ತಿದ್ದಾರೆ. ಸ್ವತಃ ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಭಿವೃದ್ಧಿ ಕೆಲಸಗಳಿಗಾಗಿ ಅಧಿಕಾರಕ್ಕೆ ಬಂದಿಲ್ಲ, ಹಣದ ಬಲದಿಂದ, ಅಧಿಕಾರದ ಆಸೆಗಾಗಿ ಪಟ್ಟಕ್ಕೇರಿದೆ ಅಷ್ಟೇ . ಅವರಿಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವುದು, ಸಮಸ್ಯೆ ಬಗೆಹರಿಸುವುದು ಯಾವುದೂ ಅಗತ್ಯವಿಲ್ಲ ಕೊರೊನಾ ಸೋಂಕಿನಿಂದ ಮಡಿದವರಿಗೆ ಪರಿಹಾರ ಘೋಷಿಸಿದರು, ಆದರೆ ಪರಿಹಾರ ನೀಡಿದರೇ? ಎರಡು ವರ್ಷದಿಂದ ಆಡಳಿತವನ್ನು ನಡೆಸುತ್ತಿದ್ದಾರೆ ಒಂದೇ ಒಂದು ಯೋಜನೆಯನ್ನು, ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆಯೇ? ಈಗ ಬೈ ಎಲೆಕ್ಷನ್ ನಲ್ಲಿ ಹಣದ ಹೊಳೆಯನ್ನು ಹರಿಸಿ ಮತದಾರರನ್ನು ಸೆಳೆಯಲು ಆಮಿಷವೊಡ್ಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಏನೇ ಕಸರತ್ತು ಮಾಡಿದರೂ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು