Friday, June 9, 2023
HomeUncategorizedಜನರಲ್ಲಿ ಭ್ರಮಲೋಕ ನಿರ್ಮಾಣ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು ಅವರ ಮಾತಿಗೆ ಮರುಳಾಗಬೇಡಿ: ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ

ಜನರಲ್ಲಿ ಭ್ರಮಲೋಕ ನಿರ್ಮಾಣ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು ಅವರ ಮಾತಿಗೆ ಮರುಳಾಗಬೇಡಿ: ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ

ವಿಜಯಪುರ: ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವವರು ಕೋಮುವಾದಿ ಪಕ್ಷ ಬಿಜೆಪಿಗೆ ಉಪ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್‌ ವಿರುದ್ಧ ಹರಿಹಾಯ್ದರು.

ಸಿಂದಗಿ ತಾಲ್ಲೂಕಿನ ಮೊರಟಗಿಯಲ್ಲಿ ಸೋಮವಾರ ಆಯೋಜಿಸಿದ್ದಂತಹ ಉಪಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ಸಿಂದಗಿ ಉಪ ಚುನಾವಣೆ ಮಹತ್ವದ್ದಾಗಿದೆ. ಕಾಂಗ್ರೆಸ್‌ ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಬೇಕು ಎಂದು ಮತದಾರರಿಗೆ ಮನವಿಯನ್ನು ಮಾಡಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಎಂದಿಗೂ ಮುಂಬಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ. 2008, 2018ರಲ್ಲಿ ಹಿಂಬಾಗಿಲಿನಿಂದಲೇ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯವರು ಯಡಿಯೂರಪ್ಪನವರಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿಸಿ ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಖರೀದಿಸಿದರು ನಂತರ ಎರಡು ವರ್ಷದ ಬಳಿಕ ಬಿಜೆಪಿ ಹೈಕಮಾಂಡ್ ಅವರನ್ನು ಹೆದರಿಸಿ, ಬೆದರಿಸಿ ಕಿತ್ತು ಹಾಕಿದರು ಎಂದು ಆರೋಪಿಸಿದರು.

ಯಡಿಯೂರಪ್ಪನಂತಹ ಕೆಟ್ಟ ಸರ್ಕಾರ ಕರ್ನಾಟಕ ರಾಜ್ಯ ಹಿಂದೆಂದೂ ಕಂಡಿರಲಿಲ್ಲ. ಅಪ್ಪ-ಮಗ ರಾಜ್ಯವನ್ನು ಲೂಟಿ ಹೊಡೆದರು ಎಂದು ಟೀಕಿಸಿದರು. ನಾನು ಸಿಎಂ ಆಗಿದ್ದಾಗ ಬಡವರಿಗೆ 10 ಕೆ.ಜಿ.ಅಕ್ಕಿ ನೀಡಿದೆ. ಬಡವರು ಕೆಲಸ ಮಾಡದೆ ಸೋಮಾರಿಗಳಾಗುತ್ತಾರೆ ಎಂದು ಬಿಜೆಪಿಯವರು ಟೀಕಿಸಿದರು. ಹೊಟ್ಟೆ ತುಂಬಿದವರಿಗೆ ಬಡವರ ಹಸಿವು ಎಲ್ಲಿ ಅರ್ಥವಾಗುತ್ತದೆ. ಕುಮಾರಸ್ವಾಮಿ ಅವರೂ ಇದೇ ಆರೋಪವನ್ನು ಮಾಡಿದರು. ಕುಮಾರಸ್ವಾಮಿ ಯಾವತ್ತಾದರೂ ಹಸಿದಿದ್ದಾರಾ ಎಂದು ಪ್ರಶ್ನಿಸಿದರು.

ಕೋವಿಡ್ ವೇಳೆ ರಾಜ್ಯದಲ್ಲಿ 4 ಲಕ್ಷ ಜನ, ದೇಶದಲ್ಲಿ 50 ಲಕ್ಷ ಜನ ಸಾವಿಗೀಡಾದರು. ಇವರು ರೋಗ ಬಂದು ಸತ್ತಿದ್ದಲ್ಲ. ಆಕ್ಸಿಜನ್, ವೆಂಟಿಲೇಟರ್, ಔಷಧ, ಬೆಡ್, ಅಂಬುಲೆನ್ಸ್ ಸಿಗದೇ ಸಾವಿಗೀಡಾದರು. ಸತ್ತವರ ಲೆಕ್ಕವನ್ನು ಸಹ ಸುಳ್ಳು ಹೇಳತೊಡಗಿದರು. ಇವರು ಮನುಷ್ಯರಲ್ಲ, ಕೊಲೆಗಡುಗರು. ಇಂಥ ಕೊಲೆ ಗಡುಕ ಬಿಜೆಪಿ, ಜೆಡಿಎಸ್ ಪಕ್ಷದವರಿಗೆ ವೋಟ್ ಹಾಕಬೇಡಿ. ಇಂಥವರಿಗೆ ವೋಟ್ ಹಾಕಿದರೆ ದೇಶ, ರಾಜ್ಯ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲ ಎಂದರು.

ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶವನ್ನು ಹಾಳು ಮಾಡಿದ್ದಾರೆ. ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದ ಸಾಲ ₹53.11 ಲಕ್ಷ ಕೋಟಿ ಇತ್ತು. ಮೋದಿ ಪ್ರಧಾನಿಯಾದ ಬಳಿಕ ₹88 ಲಕ್ಷ ಕೋಟಿ ಹೊಸದಾಗಿ ಸಾಲ ಮಾಡಿದ್ದಾರೆ. ಈಗ ದೇಶದ ಸಾಲದ ಮೊತ್ತ ₹135 ಲಕ್ಷ ಕೋಟಿಯಾಗಿದೆ. ಇವರಿಂದ ದೇಶ ಉಳಿಯಲು ಸಾಧ್ಯವೇ. ದೇಶ ಉಳಿಯಬೇಕು ಎಂದಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.

ಬಿಜೆಪಿಯವರ ಬಣ್ಣದ ಮಾತಿಗೆ ಮರುಳಾಗಬೇಡಿ. ಭ್ರಮಾಲೋಕ ನಿರ್ಮಾಣ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು. ರಾಜ್ಯದಲ್ಲಿ ಬಿಜೆಪಿ ಉಳಿದಿರುವುದೇ ಮೋದಿ ಹೆಸರಿನಲ್ಲಿ ಎಂದರು.

ಕಾರ್ಯಕ್ರಮದಲ್ಲಿ ಸಿಂದಗಿ ಉಪಚುನಾವಣಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಧ್ರುವನಾರಾಯಣ, ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತ ರಾಯಗೌಡ ಪಾಟೀಲ, ಡಾ.ಎಚ್.ಸಿ.ಮಹಾದೇವಪ್ಪ, ಅಮರೇಗೌಡ ಬಯ್ಯಾಪುರ, ಪ್ರಕಾಶ ರಾಠೋಡ, ಆನಂದ ನ್ಯಾಮಗೌಡ, ಬಸವರಾಜ ರಾಯರೆಡ್ಡಿ, ಆರ್.ಬಿ.ತಿಮ್ಮಾಪುರ, ಶರಣಪ್ಪ ಸುಣಗಾರ, ಅಲ್ಲಮಪ್ರಭು ಪಾಟೀಲ, ರಾಜು ಅಲಗೂರ ಅನೇಕರು ಇದ್ದರು.

Most Popular

Recent Comments