ಬೆಂಗಳೂರು: ಪ್ರತಿದಿನ ಬೆಳಗ್ಗೆ ಎದ್ದರೆ ನಾವು ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ಇದೀಗ ಹಿಂದೂ ದೇವಸ್ಥಾನಗಳನ್ನು ಒಡೆಯುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ನಂಜನಗೂಡಿನ ದೇವಸ್ಥಾನಕ್ಕೆ ತನ್ನದೇ ಆದಂತಹ ಇತಿಹಾಸವಿದೆ. ಪುರಾತನ ಕಾಲದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್ ಮಾಡಿರುವಂತಹ ಆದೇಶವನ್ನು ಪಾಲನೆ ಮಾಡುವುದು ಬೇಡವೆಂದು ಹೇಳುತ್ತಿಲ್ಲ. ಆದರೆ ದೇವಸ್ಥಾನವನ್ನು ಒಡೆಯುವ ಮುನ್ನ ಆ ದೇವಸ್ಥಾನದ ಸಮಿತಿಯ ಜೊತೆ ಒಂದು ಬಾರಿ ಚರ್ಚಿಸಬೇಕು. ಪರ್ಯಾಯ ದೇವಸ್ಥಾನವನ್ನು ನಿರ್ಮಿಸಿ ನಂತರ ತೆರವು ಮಾಡಲಿ ಎಂದು ಹೇಳಿದರು.
ಜೆಡಿಎಸ್ ಪಕ್ಷವನ್ನು ಮುಳಗುವ ದೋಣಿ ಎಂದು ಕರೆಯುತ್ತಿದ್ದರು. ಆದರೆ ಪಕ್ಷ ಮುಳುಗುವಾಗ ಹೇಗೆ ಮೇಲೆತ್ತುವುದು ಗೊತ್ತಿದೆ. ಸಮುದ್ರದ ಸಬ್‌ಮೆರಿನ್ ಮಷಿನ್ ನಮ್ಮ ಬಳಿ ಇದೆ. ಯಾವಾಗ ಮೇಲೆತ್ತಬೇಕು, ಯಾವಾಗ ಮುಳುಗಿಸಬೇಕು ಎಂದು ಗೊತ್ತಿದೆ. ಸಬ್‌ಮೆರಿನ್ ಯಂತ್ರವನ್ನು ರಿಪೇರಿ ಮಾಡಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಅದನ್ನು ನೋಡಿಕೊಳ್ಳುತ್ತಾರೆ. 2023ಕ್ಕೆ ಜೆಡಿಎಸ್ ಇಲ್ಲದೆ ಅಧಿಕಾರ ಮಾಡಲು ಸಾಧ್ಯವಿಲ್ಲ ಎಂದು ರೇವಣ್ಣ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.