ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ ಎಸ್ ಸಿ ಮೀಸಲು ಕ್ಷೇತ್ರಕ್ಕೆ ದೀಪಕ್ ದೊಡ್ಡಯ್ಯ ಹೆಸರು ಘೋಷಣೆ ಮಾಡಿದೆ.
ಜಿಲ್ಲೆಯಲ್ಲೇ ಅಲ್ಲದೇ ರಾಜ್ಯಮಟ್ಟದಲ್ಲೇ ಅತ್ಯಂತ ಹೆಚ್ಚು ಸುದ್ದಿ ಮಾಡಿದ್ದ ಮೂಡಿಗೆರೆ ಎಸ್ ಸಿ ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್ ಬಿಜೆಪಿಯ ತಳಮಟ್ಟದ ಕಾರ್ಯಕರ್ತರ ನಿರೀಕ್ಷೆಯಂತೆ ಬಿಜೆಪಿ ಹಾಲಿ ಶಾಸಕ ಎಂ ಪಿ ಕುಮಾರಸ್ವಾಮಿಗೆ ಟಿಕೆಟ್ ನೀಡದೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಅವರಿಗೆ ಮಣೆ ಹಾಕಿದೆ. ಈ ಮೂಲಕ ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಸಾಭೀತುಪಡಿಸಿದಂತಾಗಿದೆ. ಶಾಸಕ ಎಂಪಿಕೆಗೆ ಟಿಕೆಟ್ ನೀಡಬಾರದೆಂದು ಪಕ್ಷದ ಕಾರ್ಯಕರ್ತರೇ ಪಟ್ಟು ಹಿಡಿದಿದ್ದರು. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಚದಿಂದ 3ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದರು. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಇರುವ ಕುಮಾರಸ್ವಾಮಿಗೆ ಯಡಿಯೂರಪ್ಪ ನೀಡಿದ 19 ಜನರ ಪಟ್ಟಿಯಲ್ಲಿ ಇವರ ಹೆಸರೂ ಇತ್ತು. ಪ್ರಭಲ ಆಕಾಂಕ್ಷಿಗಳಾಗಿದ್ದ ದೀಪಕ್ ದೊಡ್ಡಯ್ಯ, ವಿಜಯ ಕುಮಾರ್, ಹೆಸರು ಹೈಕಮಾಂಡ್ ಮುಂದೆ ಹೋಗಿತ್ತು. ಇದೀಗ ಎಂ ಪಿ ಕುಮಾರಸ್ವಾಮಿಗೆ ಟಿಕೆಟ್ ನೀಡಿಲ್ಲ. ಬದಲಾಗಿ ದೀಪಕ್ ದೊಡ್ಡಯ್ಯ ಅವರ ಹೆಸರು ಘೋಷಿಸಿದೆ.
ಮೂಡಿಗೆರೆಯಲ್ಲಿ ಕಾಂಗ್ರೆಸ್ ನಿಂದ ಬಹುತೇಕ ನಯನ ಮೋಟಮ್ಮ ಅವರಿಗೆ ಟಿಕೆಟ್ ಫೈನಲ್ ಆಗಿತ್ತು ಆದರೆ ಎಂ ಪಿ ಕುಮಾರಸ್ವಾಮಿ ಕಾಂಗ್ರೆಸ್ ಸೇರಬಹುದು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಇನ್ನು ಜೆಡಿಎಸ್ ಬಿಡುಗಡೆಗೊಳಿಸಿದ ಮೊದಲ ಪಟ್ಟಿಯಲ್ಲೇ ಮೂಡಿಗೆರೆ ಮಾಜಿ ಶಾಸಕ ಬಿ ಬಿ ನಿಂಗಯ್ಯ ಅವರ ಹೆಸರಿತ್ತು. ಈ ಬಾರಿ ಮೂಡಿಗೆರೆಯಲ್ಲಿ ಜಿದ್ದಾಜಿದ್ದು ಏರ್ಪಡುವ ಸಾಧ್ಯತೆ ಹೆಚ್ಚಿದೆ.
ಚಿಕ್ಕಮಗಳೂರಿನಲ್ಲಿ ಉಳಿದ ಕಡೆ ಯಾರಿಗೆಲ್ಲಾ ಟಿಕೆಟ್ ನೀಡಿದೆ.. ಹೇಗಿದೆ ಚುನಾವಣಾ ಕಣ
ಚಿಕ್ಕಮಗಳೂರು – ಶಾಸಕ ಸಿ. ಟಿ ರವಿ
ಚಿಕ್ಕಮಗಳೂರಿನಲ್ಲಿ ನಿರೀಕ್ಷೆಯಂತೆ ಹಾಲಿ ಶಾಸಕರಾಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಅವರಿಗೆ ಬಿಜೆಪಿ ಈ ಬಾರಿಯೂ ಟಿಕೆಟ್ ನೀಡಿದೆ. ಕಳೆದ ಐದು ಅವಧಿಗೂ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡು ಸತತ ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿಯೂ ಸೇವೆ ಸಲ್ಲಿಸಿದ ಅನುಭವ ಸಿ. ಟಿ ರವಿ ಅವರಿಗಿದೆ. ಇದು 6ನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿ. ಎಲ್ ಶಂಕರ್ ವಿರುದ್ಧ ಸ್ಪರ್ಧಿಸಿದ್ದ ಸಿ. ಟಿ ರವಿ ಸುಮಾರು 26 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಕಳೆದ ಬಾರಿಗಿಂತಲೂ ಈ ಬಾರಿ ಚಿಕ್ಕಮಗಳೂರಿನ ಚುನಾವಣಾ ರಣಕಣ ರಂಗೇರಿದ್ದು ಜೆಡಿಎಸ್ ನಿಂದ ಬಿ. ಎಂ ತಿಮ್ಮಶೆಟ್ಟಿಯನ್ನು ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ವಿಚಾರ ಇನ್ನೂ ಗೊಂದಲದಲ್ಲೇ ಇದ್ದು, 2018ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ 38 ಸಾವಿರ ಮತ ಪಡೆದಿದ್ದ ಬಿ. ಹೆಚ್ ಹರೀಶ್ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ಸೇರಿದ್ದರು. ಈ ಬಾರಿ ಚಿಕ್ಕಮಗಳೂರಿನ ಕೈ ಟಿಕೆಟ್ ನ ಪ್ರಭಲ ಆಕಾಂಕ್ಷಿಯಾಗಿದ್ದಾರೆ. ಇತ್ತೀಚಿಗಷ್ಟೇ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ಸಿ. ಟಿ ರವಿ ಆಪ್ತ ಹೆಚ್ ಡಿ ತಮ್ಮಯ್ಯ ಕೂಡ ಟಿಕೆಟ್ ರೇಸ್ ನಲ್ಲಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ಘೋಷಿಸುತ್ತದೆ ಎನ್ನೋದನ್ನು ಕಾದುನೋಡಬೇಕಿದೆ.
ಕಡೂರಿನಲ್ಲಿ ಬೆಳ್ಳಿಗೆ ಒಲಿದ ಟಿಕೆಟ್
ಕಡೂರು ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಅತ್ಯಂತ ವಿಭಿನ್ನ ಕ್ಷೇತ್ರ. ಈ ಬಾರಿ ಬಿಜೆಪಿ ಹೈಕಮಾಂಡ್ ಹಾಲಿ ಶಾಸಕ ಬೆಳ್ಳಿ ಪ್ರಕಾಶ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಶಾಸಕ ಬೆಳ್ಳಿ ಪ್ರಕಾಶ್ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಲಿಂಗಾಯಿತರಾಗಿರುವ ಬೆಳ್ಳಿಗೆ ಎಲ್ಲಾ ಜಾತಿಗಳ ಬೆಂಬಲವೂ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಮುಸ್ಲಿಂ ಮತಗಳನ್ನು ಪಡೆಯುವ ಯಾರಾದರೂ ಶಾಸಕರಿದ್ದರೆ ಅದು ಬೆಳ್ಳಿ ಪ್ರಕಾಶ್. ಕಳೆದ ಕೆಲ ತಿಂಗಳುಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವೈಎಸ್ ವಿ ದತ್ತಾಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಸಿಗಲಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕಾಂಗ್ರೆಸ್ 2018ರ ಚುನಾವಣೆಯಲ್ಲಿ ಶಾಸಕ ಬೆಳ್ಳಿ ಪ್ರಕಾಶ್ ವಿರುದ್ಧ ಸ್ಪರ್ಧಿಸಿ ಪ್ರಭಲ ಪೈಟೋಟಿ ನೀಡಿದ್ದ ಆನಂದ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇದರಿಂದ ಕೆರಳಿದ ದತ್ತ ಅವರ ಬೆಂಬಲಿಗರು ಸ್ವತಂತ್ರವಾಗಿ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಇನ್ನು ಜೆಡಿಎಸ್ ನಿಂದ ಧನಂಜಯ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಈ ಬಾರಿ ಕಡೂರಿನಲ್ಲಿ ಮೂರು ಪಕ್ಷಗಳ ನಡುವೆ ಫೈಟ್ ಇದ್ದರು ಬೆಳ್ಳಿ ಪ್ರಕಾಶ್ ಕಡೆ ಸ್ವಲ್ಪ ಹೆಚ್ಚಿನ ಒಲವಿದೆ.
ಶೃಂಗೇರಿಯಲ್ಲಿ ಮಾಜಿ ಶಾಸಕ ಜೀವರಾಜ್ ಹೆಸರು
ಚಿಕ್ಕಮಗಳೂರು ಜಿಲ್ಲೆಯಲ್ಲೇ ಕಳೆದ ಬಾರಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಸೋಲು ಕಂಡಿತ್ತು. ಈ ಬಾರಿ ಮಾಜಿ ಶಾಸಕ ಡಿ. ಎನ್ ಜೀವರಾಜ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಜೀವರಾಜ್ ಸಹ ಯಡಿಯೂರಪ್ಪನವರ ಆಪ್ತರು. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಹಿಂದು ಮುಖಂಡ ಪ್ರವೀಣ್ ಖಾಂಡ್ಯ ಸ್ಪರ್ಧೆ ಜೀವರಾಜ್ ಅವರ ಸೋಲಿಗೆ ಕಾರಣವಾಗಿತ್ತು. ಸೋತ ನಂತರವೂ ಕ್ಷೇತ್ರದಲ್ಲೇ ಸಕ್ರಿಯವಾಗಿದ್ದ ಜೀವರಾಜ್ ಹಳೆಯ ಡ್ಯಾಮೇಜ್ ಗಳನ್ನು ಸರಿಪಡಿಸಿಕೊಂಡಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ತಮ್ಮ ವಿರುದ್ದ ಕೆಸಲ ಮಾಡಿದ್ದ ಹಿಂದು ಸಂಘಟನೆಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಈ ಬಾರಿ ಕೂಡ ಜೀವರಾಜ್ ಗೆ ಟಿಕೆಟ್ ನೀಡಬಾರದೆಂಬ ಕೂಗು ಕೇಳಿಬಂದಿತ್ತು. ಆದರೆ ಹೈಕಮಾಂಡ್ ಡಿ. ಎನ್ ಜೀವರಾಜ್ ಅವರಿಗೆ ಟಿಕೆಟ್ ಘೋಷಿಸಿದೆ.
ಇನ್ನು ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಉದ್ಯಮಿ ಸುಧಾಕರ್ ಶೆಟ್ಟಿ ಕಾಂಗ್ರೆಸ್ ನಿಂದ ಹಾಲಿ ಶಾಸಕ ಟಿ ಡಿ ರಾಜೇಗೌಡ ಅವರಿಗೆ ಈಗಾಗಲೇ ಟಿಕೆಟ್ ಫೈನಲ್ ಆಗಿವೆ. ಪ್ರಾರಂಭದಲ್ಲಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿತ್ತಾದರೂ ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಫೈಟ್ ಬೀಳುವ ಸಾಧ್ಯತೆಗಳಿವೆ. ಆದರೂ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಸಾಕಷ್ಟು ಸಕ್ರಿಯವಾಗಿ ಓಡಾಡುತ್ತಿದ್ದಾರೆ.
ತರೀಕೆರೆ ಟಿಕೆಟ್ ಸುರೇಶ್ ಗೆ ಫೈನಲ್
ಹಾಲಿ ಶಾಸಕ ಸುರೇಶ್ ಗೆ ಈ ಬಾರಿಯು ಟಿಕೆಟ್ ಸಿಕ್ಕಿದೆ. ಆದರೆ ಕಳೆದ ಬಾರಿಕಿಂತ ಈ ಬಾರಿ ಕಾಂಗ್ರೆಸ್ ಸ್ವಲ್ಪ ಸ್ಟ್ರಾಂಗ್ ಆಗಿವೆ ಎಂಬ ಮಾತುಗಳು ಕೇಳಿ ಬರ್ತಿವೆ. ಕಾಂಗ್ರೆಸ್ ನಿಂದ ಗೋಪಿಕೃಷ್ಣ ಹಾಗೂ ಶ್ರೀನಿವಾಸ್ ನಡುವೆ ಟಿಕೆಟ್ ಗಾಗಿ ಫೈಟ್ ನಡಿಯುತ್ತಲೇ ಇದೆ. ಇನ್ನು ತರೀಕೆರೆಯಲ್ಲಿ ಜೆಡಿಎಸ್ ನ ಅಲೆ ಇಲ್ಲ ಹೀಗಾಗಿ ಇನ್ನು ಅಭ್ಯರ್ಥಿಯ ಘೋಷಣೆಯೂ ಆಗಿಲ್ಲ.