ಬೆಂಗಳೂರು: ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೈಕಿನಿಂದ ತಾಯಿ ಮಗು ಬಿದ್ದು ಮೃತಪಟ್ಟಿರುವುದನ್ನು ನೋಡಿ ಆಘಾತಕ್ಕೊಳಗಾದ ಗಂಡ ರಸ್ತೆಯ ಮದ್ಯೆಯೇ ರೋಧಿಸುತ್ತಿದ್ದರೂ ಸ್ಥಳೀಯರು ಸಹಾಯ ಮಾಡಲು ಹೋಗದ ಘಟನೆ ನಗರದ ಮಾರತ್ ಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರಿನ ಕೆ.ಆರ್.ಪುರದಲ್ಲಿ ವಾಸವಾಗಿದ್ದ ದಂಪತಿ, ತಮ್ಮ ಪುಟ್ಟ ಮಗುವಿನೊಂದಿಗೆ ಬೈಕ್ ನಲ್ಲಿ ಧರ್ಮಪುರಿಗೆ ಹೋಗುತ್ತಿದ್ದ ವೇಳೆ ಮಾರತ್ ಹಳ್ಳಿಯ ರಿಂಗ್ ರೋಡ್ ಬಳಿ ಟಿಪ್ಪರ್ ಲಾರಿ ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತವಾದ ನಂತರ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಾಡಿಯ ಬಲಾಭಾಗಕ್ಕೆ ಗಂಡ ಬಿದ್ದಿದ್ದಾರೆ. ತಾಯಿ-ಮಗು ಎಡ ಭಾಗಕ್ಕೆ ಬಿದ್ದಿದ್ದಾರೆ. ನೆಲಕ್ಕೆ ಬಿದ್ದ ತಾಯಿ-ಮಗುವಿನ ತಲೆಯ ಮೇಲೆಯೇ ಟಿಪ್ಪರ್ ಲಾರಿ ಹರಿದುಹೋದ ಪರಿಣಾಮ ಕೆಲವೇ ಕ್ಷಣಗಳಲ್ಲಿ ತಾಯಿ-ಮಗು ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಕೆಳಗೆ ಬಿದ್ದಿದ್ದ ಹೆಂಡತಿ-ಮಗುವಿನ ತಲೆ ಅಪ್ಪಚ್ಚಿ ಆಗಿರೋದನ್ನು ನೋಡಿ ಅಘಾತಕ್ಕೊಳಗಾದ ಅವರು ಏನು ಮಾಡಬೇಕೆಂದು ತೋಚದೆ ರಸ್ತೆಯ ಮದ್ಯದಲ್ಲಿಯೇ ಹೆಂಡತಿ-ಮಗುವಿನ ಶವವನ್ನು ಅಪ್ಪಿಕೊಂಡು ರೋದಿಸುತ್ತಿದ್ದರು ಹಾಗೂ ಅಲ್ಲಿದ್ದವರ ಬಳಿ ಸಹಾಯ ಮಾಡಲು ಕೋರಿದರು. ಈ ವೇಳೆ ಅಲ್ಲಿದ್ದಂತಹ ಸ್ಥಳೀಯರು ಸಹಾಯಕ್ಕೆ ಧಾವಿಸದೇ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು. ರಸ್ತೆ ಮಧ್ಯೆ ಘಟನೆ ನಡೆದಿದ್ದರು ವಾಹನಗಳು ಶವಗಳ ಅಕ್ಕಪಕ್ಕದಲ್ಲೇ ಚಲಿಸುತ್ತಿದ್ದವು ಆದರೆ ಯಾವ ಒಬ್ಬ ವ್ಯಕ್ತಿಯು ಸಹಾಯಕ್ಕೆ ಧಾವಿಸಲಿಲ್ಲ.
ವಿಷಯ ತಿಳಿದ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಎಚ್ ಎ ಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ