Tuesday, November 28, 2023
Homeರಾಜ್ಯಕಾರು & ಬೈಕ್ ನಡುವಿನ ಸರಣಿ ಅಪಘಾತ : ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರರು

ಕಾರು & ಬೈಕ್ ನಡುವಿನ ಸರಣಿ ಅಪಘಾತ : ಸ್ಥಳದಲ್ಲಿಯೇ ಮೃತಪಟ್ಟ ಬೈಕ್ ಸವಾರರು

ಬೆಂಗಳೂರು: ಕುಡಿದ ಅಮಲಿನಲ್ಲಿ ಡಿಜೆಯೊಬ್ಬ ವೇಗವಾಗಿ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ್ದರಿಂದ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಬನಶಂಕರಿ ಯ ಸುಚಿತ್ರ ಥಿಯೇಟರ್ ಬಳಿ ಶನಿವಾರ ನಡೆದಿದೆ.

ಪಾನಮತ್ತನಾಗಿ ಕಾರು ಚಲಾಯಿಸಿದ್ದ ವ್ಯಕ್ತಿ ಡಿಜೆ ಪದ್ಮನಾಭನಗರ ನಿವಾಸಿ ಸುಹಾಸ್ ವೆಂಕಟೇಶ್ (26) ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಮೃತಪಟ್ಟವರನ್ನು ಸೀತಾರಾಮ್ (4೦) ಹಾಗೂ ಕೀರ್ತಿ ರಾಮ್ (29) ಎಂದು ಗುರುತಿಸಲಾಗಿದ್ದು, ಇಬ್ಬರೂ ರಾಜಸ್ಥಾನ ಮೂಲದವರಾಗಿದ್ದು, ಬನಶಂಕರಿಯ ಕಾವೇರಿ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎಂದು ಹೇಳಲಾಗುತ್ತಿದೆ.

ಮೃತರಿಬ್ಬರೂ ಮರಗೆಲಸ ಮಾಡುತ್ತಿದ್ದು, ಅಪಘಾತ ಸಂಭವಿಸಿದ ದಿನ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರೂ ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪಾರ್ಟಿಯಿಂದ ತನ್ನ ಸ್ನೇಹಿತೆ ಜೊತೆ ಮರಳುವಾಗ ಪಾನಮತ್ತನಾಗಿದ್ದ ಸುಹಾಸ್, ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಮೊದಲಿಗೆ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದ ಆತ ಬಳಿಕ ಬೈಕ್’ಗೆ ಡಿಕ್ಕಿ ಹೊಡೆದಿದ್ದಾನೆ.

ಈ ವೇಳೆ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ಕೀರ್ತಿ ರಾಮ್ ಹಾಗೂ ಸೀತಾರಾಮ್ ಇಬ್ಬರು ಕಳೆಗೆ ಬಿದ್ದಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸದ ಕಾರಣ ಬಿದ್ದ ರಭಸಕ್ಕೆ ಇಬ್ಬರ ತಲೆಗೂ ಗಂಭೀರ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಡಿಜೆ ಸುಹಾಸ್‌ಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ರಕ್ತದ ಪರೀಕ್ಷೆ ವೇಳೆ ಸುಹಾಸ್ ಪಾನಮತ್ತನಾಗಿದ್ದ ಎಂಬುದು ದೃಢಪಟ್ಟಿದೆ. ಆಸ್ಪತ್ರೆಯಲ್ಲಿ ಸುಹಾಸ್ ಚಿಕಿತ್ಸೆ ಪಡೆಯುತ್ತಿರುವುದರಿಂದ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಕಾದು ಕುಳಿತಿದ್ದಾರೆಂದು ತಿಳಿದುಬಂದಿದೆ.

ಘಟನೆ ಕುರಿತು ಪ್ರತ್ಯಕ್ಷದರ್ಶಿಗಳು ಮಾಹಿತಿಯನ್ನು ನೀಡಿದ್ದು, ಕಾರನ್ನು ಅಡ್ಡಾದಿಟ್ಟಿ ಚಲಾಯಿಸಲಾಗುತ್ತಿತ್ತು. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮೊದಲಿಗೆ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದಿದ್ದ. ಬಳಿಕ ಬೈಕ್’ಗೆ ಡಿಕ್ಕಿ ಹೊಡೆದರು. ಘಟನೆ ಬಳಿಕ ಸ್ಥಳದಿಂದ ಕಾಲ್ಕಿತ್ತಲು ಕಾರಿನಲ್ಲಿದ್ದ ಚಾಲಕ ಹಾಗೂ ಸ್ನೇಹಿತೆ ಇಬ್ಬರು ಪ್ರಯತ್ನಿಸಿದ್ದರು. ಆದರೆ, ಸ್ಥಳೀಯರು ಚಾಲಕ ಸುಹಾಸ್ ನನ್ನು ಹಿಡಿದು ಪೊಲೀಸರು ವಶಕ್ಕೆ ನೀಡಿದ್ದರು. ಆದರೆ, ಕಾರಿನಲ್ಲಿದ್ದ ಯುವತಿ ಅಪಘಾತಕ್ಕೀಡಾದ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಸಹಾಯ ಮಾಡದೆ ಸ್ಥಳದಿಂದ ಪರಾರಿಯಾಗಿದ್ದಾಳೆ ಎಂದು ಹೇಳಿದ್ದಾರೆ.

ಮೃತಪಟ್ಟವರ ಸಂಬoಧಿಕರು ಹೇಳಿಕೆ ನೀಡಿ, ಇಬ್ಬರೂ 8 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದರು. ಅಪಾರ್ಟ್ ಮೆಂಟರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಾಜಸ್ಥಾನದಲ್ಲಿಯೇ ಕುಟುಂಬಸ್ಥರನ್ನು ಬಿಟ್ಟು ನಗರಕ್ಕೆ ಬಂದಿದ್ದರು. ಎರಡು ತಿಂಗಳ ಹಿಂದಷ್ಟೇ ಕುಟುಂಬಸ್ಥರನ್ನು ಭೇಟಿ ಮಾಡಿ ಬಂದಿದ್ದರು ಎಂದು ತಿಳಿಸಿದ್ದಾರೆ.

Most Popular

Recent Comments