ಸಂತ ಸಿದ್ದೇಶ್ವರ ಶ್ರೀಗಳ ಜೀವನ, ಆ ಪುಣ್ಯಾತ್ಮರು ತನ್ನ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಆದರ್ಶ..
ಜ್ಞಾನವನ್ನು ಪಸರಿಸುತ್ತಾ ಕೋಟ್ಯಂತರ ಭಕ್ತರ ಹೃದಯ ಸಿಂಹಾಸನದಲ್ಲಿ ಹೊಕ್ಕಿದ ಪರಿ.. ಹೊನ್ನಿನ ಸುಪತ್ತಿಗೆಯಲ್ಲೇ ಕುಳಿತು ಜೀವನ ಸಾಗಿಸೋ ಅವಕಾಶವಿದ್ರೂ ಎಲ್ಲವನ್ನೂ ಬದಿಗಿಟ್ಟು ಸರಳವಾಗಿ ವೈರಾಗಿಯ ಜೀವನ ನಡೆಸಿದ ರೀತಿ.. ಕೊನೆಗೆ ಪ್ರಕೃತಿಯಲ್ಲಿ ಲೀನವಾಗುವಾಗಲೂ ಯಾವುದೇ ಕಂದಾಚಾರಗಳಿಗೆ ಅವಕಾಶಕೊಡದಂತೆ ಸ್ವತಃ ಅವರೇ ಆಯ್ಕೆ ಮಾಡಿಕೊಂಡ ದಾರಿ..!
ಅವರ ಬದುಕಿನ ಪ್ರತಿ ಹೆಜ್ಜೆಯೂ ನನ್ನನ್ನೂ ಸೇರಿದಂತೆ ಅಸಂಖ್ಯ ಮಂದಿಯನ್ನ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ನಾನು, ನನ್ನದು ಎಂಬ ಸ್ವಾರ್ಥದ ಬದುಕಿನಲ್ಲಿ ನಾವುಗಳು ಯೋಚಿಸುತ್ತಾ, ಕಚ್ಚಾಡುತ್ತಾ ಜೀವನ ನಡೆಸಿದರೆ ಇದು ದೈಹಿಕವಾಗಿ ನಮ್ಮನ್ನಗಲಿದ ಜ್ಞಾನಯೋಗಿಗೆ ಮಾಡುವ ಅವಮಾನವಲ್ವೇ ಅನ್ನೋ ಚಿಂತನೆ ಕಾಡ್ತಿದೆ. ಖಂಡಿತಾ, ಈ ಸಮಾಜದಲ್ಲಿ ಬದುಕಬೇಕಾದ್ರೆ ಒಂದಷ್ಟು ಸ್ವಾರ್ಥ ಇರಲೇಬೇಕು ಅಂದುಕೊಳ್ಳೋಣ. ಅದು ಕೇವಲ ನಮ್ಮ ಕುಟುಂಬದ ಹೊಟ್ಟೆ-ಬಟ್ಟೆ ತುಂಬಿಸಿಕೊಳ್ಳಲು, ಇರಲೊಂದು ಮನೆ.. ಶಿಕ್ಷಣ, ಆರೋಗ್ಯ, ಜೊತೆಗೆ ನಮ್ಮ ಜೀವನ ಸಾಗಿಸಲು ಎಷ್ಟು ಬೇಕೋ ಅಷ್ಟು ಮಾತ್ರ ಹಣ ಮಾಡೋ ಸ್ವಾರ್ಥ ಆಗಿರಬೇಕು ಅಷ್ಟೇ. ಅದಕ್ಕೂ ಮಿಗಿಲಾಗಿ ಇನ್ನೂ ಬೇಕು, ಮತ್ತಷ್ಟು ಬೇಕು, ಕೊಳೆಯುವಷ್ಟು ಬೇಕು.. ಅಂತಾ ನಾವು ಯೋಚಿಸುತ್ತಾ ದುಡ್ಡಿನ ಹಿಂದೆಯೇ ಓಡುತ್ತಾ ಜೀವನ ಸಾಗಿಸೋ ಯೋಚನೆ ಮಾಡಿದ್ರೆ, ಇಂದು ದೈಹಿಕವಾಗಿ ಮರೆಯಾದ ಮಹಾನ್ ಚೇತನ ಸಿದ್ದೇಶ್ವರ ಶ್ರೀಗಳ ಹೆಸರೇಳಲು ನಮಗೆ ಯಾವುದೇ ಯೋಗ್ಯತೆ ಇರಲಾರದು ಅನ್ನೋದನ್ನ ತೋರಿಸುತ್ತೆ. ಅವರ ಬದುಕು ಎಷ್ಟು ಸರಳವಾಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ..
ಹಾಗಾಗಿಯೇ ನಮ್ಮೆಲ್ಲರ ಮನಸ್ಸಿನಲ್ಲಿ ಆ ಸುಜ್ಞಾನದ ನಕ್ಷತ್ರ ಮಿರ ಮಿರ ಅಂತಾ ಮಿನುಗುತ್ತಿದೆ. ಅದನ್ನ ನಾವೆಲ್ಲರೂ ಸದಾ ಹಾಗೆಯೇ ಜತನದಿಂದ ಕಾಪಾಡಿಕೊಳ್ಳೋಣ..! ಅವರು ಬದುಕಿನುದ್ದಕ್ಕೂ ಪಾಲಿಸಿದ ಆದರ್ಶದ ನಡೆಯಲ್ಲಿ ಕೊನೆಪಕ್ಷ ಎಳ್ಳಷ್ಟಾದ್ರೂ ರೂಢಿಸಿಕೊಳ್ಳೋಣ.!
ಅದರಲ್ಲೂ ನಮ್ಮ ಒಂದಷ್ಟು ರಾಜಕೀಯ ನಾಯಕರುಗಳು ಈ ಬಗ್ಗೆ ಹೆಚ್ಚು ಆತ್ಮಾವಲೋಕನ ಮಾಡಿಕೊಳ್ಳೋದು ಒಳಿತು.! ಕೊಳೆಯುವಷ್ಟು ಸಂಪತ್ತನ್ನ ನಿಮ್ಮಲ್ಲೇ ಇಟ್ಕೊಂಡು, ಮತ್ತಷ್ಟು ದುಡ್ಡು ಮಾಡೋ ಪಂಚವಾರ್ಷಿಕ ಯೋಜನಗೆಳನ್ನ ಮನಸ್ಸಿನಲ್ಲಿಯೇ ರೂಪಿಸುತ್ತಾ, ಜನರೆದುರು ನಾನು ಬಡತನವನ್ನ ತೊಲಗಿಸಿಯೇ ಸಿದ್ದ ಅನ್ನೋ ಬಿಟ್ಟಿ ಭಾಷಣವನ್ನ ಬಿಟ್ಬಿಡಿ. ಹಾಗಂತ ನಿಮ್ಮಲ್ಲಿರುವ ಎಲ್ಲಾ ಸಂಪತನ್ನ ಕೊಟ್ಬಿಡಿ ಅಂತಾನೂ ಅಲ್ಲ, ಒಪ್ಪೊತ್ತಿನ ಊಟಕ್ಕೂ ಪರದಾಡ್ತಿರೋ ಅದೆಷ್ಟೋ ಮಂದಿಯ ಹೊಟ್ಟೆ-ಬಟ್ಟೆಗೆ ಭವಿಷ್ಯದಲ್ಲಾದ್ರೂ ಮುಳುವಾಗ್ಬೇಡಿ ಅನ್ನೋ ವಿನಮ್ರ ಕೋರಿಕೆಯಷ್ಟೇ. ಕ್ಷಮೆ ಇರಲಿ, ಎಲ್ಲಾ ರಾಜಕಾರಣಿಗೆ ಈ ಮಾತು ಅನ್ವಯಿಸಲ್ಲ, ಆದರೆ ಬಹುತೇಕ ರಾಜಕೀಯ ನಾಯಕರಿಗೆ ಖಂಡಿತಾ ಅನ್ವಯಿಸುತ್ತದೆ. ಹಾಗಂತ ಅವರ್ಯಾರು ಕೆಟ್ವವರೂ ಅಂತಾಲೂ ಅಲ್ಲ, ನಿಮ್ಮಲ್ಲೂ ಸಿದ್ದೇಶ್ವರರು ಹೊಸ ಅಲೋಚನೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಅನ್ನೋದು ನನ್ನಂತಹ ಅಸಂಖ್ಯ ಜನಸಾಮಾನ್ಯರ ನಂಬಿಕೆ. ಇಲ್ದಿದ್ರೆ ನೀವುಗಳು ಹಾಕಿಕೊಂಡಿದ್ದ ವಾಟ್ಸಾಪ್ ಡಿಪಿ-ಸ್ಟೇಟಸ್, ಫೇಸ್ಬುಕ್ ಪೋಸ್ಟ್, ಇನ್ ಸ್ಟಾಗ್ರಾಂ ಬರಹಗಳಿಗೆ ಯಾವುದೇ ಕಿಮ್ಮತ್ತು ಇರಲ್ಲ.. ! ಜನರು ನಿಮ್ಮ ನಡೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಲೇ ಇರ್ತಾರೆ ಅನ್ನೋದನ್ನ ಮರೆಯಬೇಡಿ.
ಕೊನೆಯದಾಗಿ, ಸಂತ ಸಿದ್ದೇಶ್ವರರು ನಡೆದಾಡಿದ ಧೂಳಿನ ಸಮಕ್ಕಾದ್ರೂ ನಾವು ಬದಲಾದ್ರೆ, ಒಂದೊಂದು ಹೆಜ್ಜೆಯಲ್ಲೂ ಅರ್ಥಪೂರ್ಣ ಜೀವನ ನಡೆಸಿದ ಮಹಾನ್ ಸಂತನಿಗೆ ನಾವು ಒಂದಷ್ಟಾದ್ರೂ ಗೌರವ ಕೊಟ್ಟಂತಾಗುತ್ತದೆ ..!
✍️ ಪ್ರಶಾಂತ್ ಮೂಡಿಗೆರೆ