Tuesday, November 28, 2023
Homeಲೇಖನಗಳು“ ವಸಂತವನದ ಕವಿಕೋಗಿಲೆ, ರಾಜನ ಬಿರುದು ಬಯಸದು”

“ ವಸಂತವನದ ಕವಿಕೋಗಿಲೆ, ರಾಜನ ಬಿರುದು ಬಯಸದು”

ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ , ಬೇಂದ್ರೆಯವರಿಂದ “ಯುಗದ ಕವಿ, ಜಗದ ಕವಿ” ಎನಿಸಿಕೊಂಡು, ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಪ್ರಯುಕ್ತ ವಿಶ್ವಮಾನವ ದಿನಾಚರಣೆಯನ್ನು ಆಚರಿಸಲಾಗುತ್ತದೆ.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರವರು ಹುಟ್ಟಿದ್ದು 1904ರ ಡಿಸೆಂಬರ್ 29ರಂದು. ತಾಯಿಯ ತವರೂರಾದ ಹಿರೇಕೊಡಿಗೆ, ಕೊಪ್ಪ ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ. ತಂದೆ ವೆಂಕಟಪ್ಪ ಗೌಡ, ತಾಯಿ ಸೀತಮ್ಮ. ಕುವೆಂಪುರವರ ಬಾಲ್ಯ ತಂದೆಯ ಊರಾದ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ, ಮಲೆನಾಡಿನ ಮಡಿಲಲ್ಲಿ ಬೆಳೆದ ಕುವೆಂಪುರವರು ತಮ್ಮ ಪ್ರಾಥಮಿಕ ಶಿಕ್ಷಣವು ಕೂಲಿಮಠದಲ್ಲಿ ಪ್ರಾರಂಭವಾಯಿತು. ನಂತರದಲ್ಲಿ ಕೆಲವು ಸಮಯ ಕ್ರೈಸ್ತ ಶಿಕ್ಷಣವನ್ನು ನೀಡಲಾಯಿತು. ಮನೆಯಲ್ಲಿ ನಡೆಯುತ್ತಿದ್ದ ಜೈಮಿನಿ ಭಾರತ, ರಾಮಾಯಣ, ಮಹಾಭಾರತದ ವಚನಗಳು ಬಾಲಕ ಕುವೆಂಪುವಿನ ಮೇಲೆ ಗಾಢವಾದ ಪ್ರಭಾವ ಬೀರಿತು.

1918ರಲ್ಲಿ ನಂತರದ ಶಿಕ್ಷಣಕ್ಕಾಗಿ ಮೈಸೂರಿನಲ್ಲಿ ನೆಲೆಸಿದರು. ಹಾರ್ಡ್ವಿಕ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದರು. ಆಂಗ್ಲ ಸಾಹಿತ್ಯದ ಮೇಲೆ ಒಲವು ತೋರಿದ ಕುವೆಂಪು ಹಲವಾರು ಆಂಗ್ಲ ಸಾಹಿತ್ಯದ ಪುಸ್ತಕಗಳನ್ನು ಓದಿಕೊಂಡು ಬೆಳೆದರು.
ನಂತರದಲ್ಲಿ ಕುವೆಂಪುರವರು ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಎಲ್ಲಾ ಬಗೆಯ ಸಾಹಿತ್ಯ ರೂಪಕಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕನ್ನಡದಲ್ಲಿ 80ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಪ್ರಾರಂಭದಲ್ಲಿ ಅಂದರೆ 1920 ರಲ್ಲಿ ಕುವೆಂಪುರವರು ಪದ್ಯ ರಚನೆಯನ್ನು ಇಂಗ್ಲಿಷಿನಲ್ಲಿ ಮಾಡುತ್ತಿದ್ದರು. ಇವರು ಸಾಹಿತ್ಯಕ್ಕೆ ಪ್ರಭಾವಿ ಭಾಷೆ ಇಂಗ್ಲಿಷ್ ಎಂದು ಭಾವಿಸಿದ್ದರು. ಒಮ್ಮೆ ಐರಿಷ್ ಕವಿ ಜೆ.ಎಚ್ ಕಸಿನ್ಸ್ ಎಂಬುವರು ಶ್ರೀರಂಗಪಟ್ಟಣಕ್ಕೆ ಬಂದಾಗ ಕುವೆಂಪುರವರು ತಾವು ರಚಿಸಿದ ಕವನ ಸಂಕಲನಗಳನ್ನು ತೋರಿಸಿದರು. ಕವನಗಳನ್ನು ನೋಡಿದ ಕಸಿನ್ಸ್ ಕನ್ನಡದಲ್ಲಿ ಪದ್ಯ ರಚಿಸಲು ಸಲಹೆ ನೀಡಿದರು. ಆಗ ಕುವೆಂಪುರವರು ಇಂಗ್ಲೀಷಿನ ಹಾಗೆ ಕನ್ನಡದಲ್ಲಿ ಭಾವನೆಗಳನ್ನು ಮೂಡಿಸಲು ಸಾಧ್ಯವೇ? ಈ ಅಸಾಧಾರಣ ಶಕ್ತಿ ಕನ್ನಡಕ್ಕಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಇದನ್ನು ತಿಳಿದ ಕಸಿನ್ಸ್ ಹಾಗೆ ಭಾವಿಸಬೇಕಿಲ್ಲ. ಒಂದು ಭಾಷೆ ಮತ್ತೊಂದು ಭಾಷೆಗಿಂತ ಕೀಳೇನಲ್ಲ. ಪ್ರತಿಭೆ ಇರುವವರು ಬಳಸಿದರೆ ಎಲ್ಲಾ ಭಾಷೆಯು ಪ್ರಭಾವ ಬೀರಬಲ್ಲದಾಗುತ್ತದೆ ಎಂದರು. ಅಂದಿನಿಂದ ಕುವೆಂಪುರವರು ಕನ್ನಡದಲ್ಲಿ ಬರೆಯಲು ನಿರ್ಧರಿಸಿದರು.


ಮೊಟ್ಟ ಮೊದಲು “ಅಮಲನ ಕಥೆ” ಎಂಬ ಕನ್ನಡ ಪುಸ್ತಕ ಪ್ರಕಟಿಸಿದರು. ಇದೊಂದು ಕಾವ್ಯ ಕೃತಿಯಾಗಿದೆ. ನಂತರದಲ್ಲಿ ಮಹಾರಾಜ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಅಲ್ಲಿನ ಬಿ.ಎಂ ಶ್ರೀಕಂಠಯ್ಯ, ಟಿ.ಎಸ್ ವೆಂಕಣ್ಣಯ್ಯ, ಎ.ಆರ್ ಶಾಸ್ತ್ರಿ ಮುಂತಾದವರ ಸಂಗಡದಿಂದ ಕನ್ನಡದ ಮೇಲಿನ ಅಭಿಮಾನ ಇಮ್ಮಡಿಯಾಯಿತು.
1927ರಲ್ಲಿ ಇವರು ತತ್ವಶಾಸ್ತ್ರದಲ್ಲಿ ಬಿ.ಎ ಪಾಸು ಮಾಡಿಕೊಂಡು ಆಗ ತಾನೆ ಪ್ರಾರಂಭಗೊಂಡ ಕನ್ನಡ ಎಂ.ಎ ತರಗತಿ ಸೇರಿದರು. ಎಂ.ಎ ಮುಗಿಸಿ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಿದರು. 1956ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯಾದ ನಂತರ 1960ರಲ್ಲಿ ಮಾನಸ ಗಂಗೋತ್ರಿಯನ್ನು ಸ್ಥಾಪಿಸಿದರು.


ಕುವೆಂಪು ಕನ್ನಡ ವಸಂತವನದಲ್ಲಿ ಸದಾ ಕವಿ ಕೋಗಿಲೆಯಾಗಿದ್ದರು. ದರ್ಪದೌರ್ಜನ್ಯಗಳಿಗೆ ಎಂದೂ ತಲೆ ಬಾಗದ ಸ್ವಾಭಿಮಾನಿಯಾಗಿದ್ದರು. ವಸಂತವನದಲ್ಲಿ ಕೂಗುವ ಕೋಗಿಲೆ ರಾಜನ ಬಿರುದನ್ನು ಬಯಸದು ಎಂದು ಹಾಡಿದ್ದರು. ಮೂಢನಂಬಿಕೆ ಮತ್ತು ಸಂಪ್ರದಾಯ ವಿರೋಧಿಗಳಾಗಿದ್ದ ಅವರದು ಅನಿಕೇತನ ಪ್ರಜ್ಞೆ. ಪ್ರತಿಯೊಂದು ಮಗು ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅಲ್ಪ ಮಾನವನನ್ನಾಗಿ ಮಾಡುತ್ತೇವೆ , ಮತ್ತೇ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ಶಿಕ್ಷಣದ ಕರ್ತವ್ಯವಾಗಬೇಕೆಂದು ಒತ್ತಿ ಹೇಳಿದರು. ನಮ್ಮ ಹಳೆಯ ಶಾಸ್ತ್ರ ಪುರಾಣಗಳನ್ನು ಹೊಸ ಬೆಳಕಿನಲ್ಲಿಟ್ಟು ನೋಡಿ ಅದರೊಳಗಿನ ಕಸ, ಕೊಳೆಗಳನ್ನು ತೆಗೆದು ಅಲ್ಲಿ ಹೊಸ ದೃಷ್ಟಿಕೋನವನ್ನಿಟ್ಟು ಕಸಿ ಮಾಡಿದರು. ಎಲ್ಲಾ ಸಮಾಜದ ಮೌಡ್ಯ, ಧರ್ಮಾಂದತೆ, ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಗಳಿಂದ ಮುಕ್ತವಾದ ಸನಾತನ ಧರ್ಮ ಅವರ ಕನಸಾಗಿತ್ತು. ಕುವೆಂಪುರವರು ಬರೆದ “ಮಲೆಗಳಲ್ಲಿ ಮದುಮಗಳು” ಮತ್ತು “ಕಾನೂರು ಸುಬ್ಬಮ್ಮ ಹೆಗ್ಗಡತಿ”
ಭಾರತದ ಸಾಹಿತ್ಯದಲ್ಲೇ ಅತಿ ಶ್ರೇಷ್ಠ ಕೃತಿಗಳು ಎನಿಸಿದೆ. ಇವರ “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯ ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಸಂಸ್ಕೃತ ಹಾಗೂ ಹಿಂದಿ ಭಾಷೆಗೆ ಅನುವಾದವಾಗಿದೆ. ಕನ್ನಡ ನಾಡಗೀತೆಯನ್ನು ರಚಿಸಿದ ಮೇರು ಕವಿ, ರಾಷ್ಟ್ರಕವಿ ಬಿರುದನ್ನು ಅಲಂಕರಿಸಿದ ಮಹಾನ್ ಚೇತನ, ಇಂತಹ ಅದ್ವಿತೀಯ ಸಾಧನೆಯನ್ನು ಕೃತಿಗಳನ್ನು ನೀಡಿದ ಕವಿಗಳು ಅತಿ ವಿರಳ.
ಕುವೆಂಪುರವರು ನವೆಂಬರ್ 11 1994 ರಲ್ಲಿ, ಮೈಸೂರಿನಲ್ಲಿ ನಿಧನರಾದರು. ಅವರ ಹುಟ್ಟೂರಾದ ಮಲೆನಾಡ ಮಡಿಲಲ್ಲಿರುವ ಕುಪ್ಪಳ್ಳಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸುವ ಮೂಲಕ ಕುವೆಂಪು ಜನಮಾನಸದಲ್ಲಿ ಸದಾಕಾಲ ನೆಲೆಸಿದ್ದಾರೆ.

– ಸಚಿನ್ ಹೊಳೆಹದ್ದು.

Most Popular

Recent Comments