ಚಿಕ್ಕಮಗಳೂರು: ನಾನು ಖೈದಿಯಾಗಿ ಜೈಲಿನಲ್ಲಿ ಇದ್ದವನು. 1975ರಲ್ಲಿ ಎಮರ್ಜೆನ್ಸಿ ಟೈಮಲ್ಲಿ ಆರು ತಿಂಗಳು ಜೈಲಿನಲ್ಲಿ ಇದ್ದೆ. ಜೈಲಲ್ಲಿ ಏನಿರುತ್ತೆ? ಏನಿರಲ್ಲ? ಹೊರಗಿನಿಂದ ಒಂದು ಬೀಡಿ ತರಿಸಿಕೊಳ್ಳಲು ಎಷ್ಟು ಹಣ ನೀಡಬೇಕಿತ್ತು ಎಲ್ಲಾ ನನಗೆ ಗೊತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಜಿಲ್ಲೆಯ ತರೀಕೆರೆಯಲ್ಲಿ ಮಾತನಾಡಿದ ಅವರು, ಜೈಲಲ್ಲಿ ಊಟ ಸರಿ ಇರಲ್ಲ. ಕೆಮಿಕಲ್ ಹಾಕಿ ಕೊಡುತ್ತಾರೆ ಎಂದು ಖೈದಿ ಬರಿದಿದ್ದಾರೆ ಎನ್ನಲಾದ ಪತ್ರದ ವಿಷಯವಾಗಿ ಅರಗ ಜ್ಞಾನೇಂದ್ರ ರವರು ಮಾತನಾಡಿದ್ದಾರೆ.
ಈ ಪತ್ರವನ್ನು ಖೈದಿಯೇ ಬರೆದಿದ್ದಾರೋ ಅಥವಾ ಯಾರು ಬರೆದಿದ್ದಾರೋ ಗೊತ್ತಿಲ್ಲ. ಆದರೆ ಇದು ನನ್ನ ಫೋನಿಗೂ ಬಂದಿದೆ. ನಾನು ಪರಪ್ಪನ ಅಗ್ರಹಾರ ಜೈಲಿಗೆ ಸಂದರ್ಶನ ಮಾಡಲು ಹೂಗಿದ್ದೆ. ಸುಮಾರು ಎರಡು-ಮೂರು ಗಂಟೆ ಇಡೀ ಜೈಲು ಸುತ್ತಿದ್ದೇನೆ. ಅಲ್ಲಿರುವವರ ಜೊತೆ ಮಾತನಾಡಿದ್ದೇನೆ. ಎಲ್ಲಾ 100 ಪರ್ಸೆಂಟ್ ಎಂದು ನಾನು ಹೇಳಲ್ಲ. ಸಣ್ಣಪುಟ್ಟ ನ್ಯೂನ್ಯತೆಗಳಿವೆ. ಅಧಿಕಾರಿಗಳ ಜೊತೆ ಮಾತನಾಡಿ ಎಚ್ಚರಿಕೆಯನ್ನು ಕೊಟ್ಟು ಬಂದಿದ್ದೇನೆ ಎಂದರು.
ಎಮರ್ಜೆನ್ಸಿ ಯ ಸಮಯದಲ್ಲಿ ಆರು ತಿಂಗಳು ನಾನು ಖೈದಿಯಾಗಿ ಜೈಲಿನಲ್ಲಿ ಇದ್ದೆ. ನಾನು, ಜೆ.ಎಚ್.ಪಟೇಲ್, ಡಿ.ಎಚ್.ಶಂಕರಮೂರ್ತಿ ಎಲ್ಲರೂ ಜೈಲಿನಲ್ಲಿಯೇ ಇದ್ದೆವು ಎಂದು ತಮ್ಮ ಜೈಲುವಾಸದ ಅನುಭವವನ್ನ ಬಿಚ್ಚಿಟ್ಟಿದ್ದಾರೆ. ನಾನೇ ಜೈಲಿಗೆ ಹೋದಾಗ ಗಂಜಿ ಕೊಟ್ಟಿದ್ದರು. ಅದರ ಒಳಗೆ ಅಕ್ಕಿ ಹುಳ ತೇಲುತ್ತಿತ್ತು. ಆಗ ನಾವೇ ಅಕ್ಕಿಯನ್ನ ತೆಗೆದು ಹುಳಗಳನ್ನು ಆರಿಸಿ ಆಮೇಲೆ ಅಡುಗೆ ಮಾಡಿಸಿದ್ದೆವು. ಕಳಪೆ ಅಕ್ಕಿ, ಬೆಳೆ, ಬೆಲ್ಲ ಎಲ್ಲಿ ರಿಜೆಕ್ಟ್ ಆಗಿರುತ್ತಿತ್ತೋ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿತ್ತೋ ಆ ಕೆಟ್ಟ ಕಳಪೆ ಗುಣಮಟ್ಟದ್ದನ್ನ ಜೈಲಿಗೆ ವಿತರಿಸುತ್ತಿದ್ದರು.
ಆದರೆ ಈಗ ಜೈಲಿನಲ್ಲಿ ಮುದ್ದೆ ತಿನ್ನೋರಿಗೆ ಮುದ್ದೆ. ಚಪಾತಿ ತಿನ್ನೋರಿಗೆ ಚಪಾತಿ ಇರುತ್ತದೆ. ನಾವು ಜೈಲಲ್ಲಿ ಇದ್ದಾಗ ಚಹಾ ಇರಲಿಲ್ಲ. ಈಗ ಬೆಳಗ್ಗೆ ಎದ್ದ ಕೂಡಲೇ ಜೈಲಲ್ಲಿ ಚಹಾ ಕೊಡುತ್ತಾರೆ. ಬೆಳಗ್ಗೆ ತಿಂಡಿ ಇದೆ. ಯಾವ ದಿನ ಯಾವ ತಿಂಡಿ ಎಂದು ಬೋರ್ಡ್ ಹಾಕಿದ್ದಾರೆ. ಜೈಲಿನ ಸ್ಥಿತಿ ಈಗ ಹೇಗಿದೆ ಎಂದು ಗೊತ್ತಿಲ್ಲ ಆದರೆ ಮೊದಲಿನಂತೆ ಇಲ್ಲ. ಅಧಿಕಾರಿಗಳ ಜೊತೆ ಮಾತನಾಡಿ ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಎಲ್ಲಾ ಸರಿ ಮಾಡುತ್ತೇವೆಂದು ಹೇಳಿದ್ದರೆ. ಮತ್ತೆ ಜೈಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಮಾಧ್ಯಮ ವರ್ಗದವರಿಗೆ ಮಾಹಿತಿಯನ್ನು ನೀಡಿದ್ದಾರೆ.