ಕಳೆದ ಎರಡು ವರ್ಷಗಳಿಂದ ಎರಡು ಕೈಕಾಲುಗಳ ಸ್ವಾಧೀನವನ್ನು ಕಳೆದುಕೊಂಡು ಹಾಸಿಗೆಯಲ್ಲಿ ಬಿದ್ದಿದ್ದ 37 ವರ್ಷದ ಆರ್ಮುಗ ಎಂಬುವರಿಗೆ ತುಮಖಾನೆಯ ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ಸಹಾಯಹಸ್ತ ಚಾಚಿದ್ದಾರೆ.
ನಿನ್ನೆ ಎನ್.ಆರ್ ಪುರ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಬೂಸ್ಟರ್ ವಿತರಿಸಿದ ಬಳಿಕ ಸುತ್ತಮುತ್ತಲ ಗ್ರಾಮಗಳಿಗೆ ಭೇಟಿ ನೀಡಿದರು. ಎನ್. ಆರ್ ಪುರ ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇಡುವಳ್ಳಿ ಗ್ರಾಮದಲ್ಲಿ ವಾಸವಾಗಿರುವ ಮುನಿಸ್ವಾಮಿ ರವರ ಮಗ 37 ವರ್ಷದ ಆರ್ಮುಗ ಎಂಬವವರಿಗೆ ಸುಮಾರು ಎರಡು ವರ್ಷಗಳಿಂದ ನರದ ನ್ಯೂನ್ಯತೆ ಸಮಸ್ಯೆ ಉಂಟಾಗಿ ಎರಡು ಕೈಕಾಲುಗಳು ಸ್ವಾಧೀನವನ್ನು ಕಳೆದುಕೊಂಡಿವೆ. ಇವರು ಕಳೆದೆರಡು ವರ್ಷಗಳಿಂದಲೂ ಸಹ ಹಾಸಿಗೆಯನ್ನು ಬಿಟ್ಟು ಮೇಲೆ ಎದ್ದಿಲ್ಲ. ಹಾಗೂ ಊರಿನ ಹೊರಗೆ ಇರುವ ಜಮೀನಿನಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ವಾಸಮಾಡುತ್ತಿದ್ದಾರೆ. ಅಲ್ಲದೆ ಈತನನ್ನು ಇವರ ವೃದ್ಧ ತಂದೆ ತಾಯಿಗಳ ನೋಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದನ್ನು ಗಮನಿಸಿದ ಸುಧಾಕರ್ ಶೆಟ್ಟಿ ಅವರು ಸ್ಥಳದಲ್ಲೇ ಹತ್ತು ಸಾವಿರ ರೂ. ನೀಡಿದ್ದಲ್ಲದೆ, ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರಿಗೆ ಕರೆ ಮಾಡಿದ್ದಾರೆ ಬಳಿಕ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ವೀರಭದ್ರ ಅವರಿಗೂ ವಿಷಯ ಮುಟ್ಟಿದ್ದು ತಕ್ಷಣವೇ ಸ್ಥಳಕ್ಕೆ ಆ್ಯಂಬುಲೆನ್ಸ್ ಕಳುಹಿಸಿ ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಅಲ್ಲದೇ ವೀರ ಪ್ರಸಾದ್ ಎಂಬ ವೈದ್ಯರನ್ನು ಪ್ರತ್ಯೇಕವಾಗಿ ನೇಮಕ ಮಾಡಲಾಗಿದೆ.
ಎಸ್ ಶೆಟ್ಟಿ ಅವರು ಮೂಲತಃ ಕೊಪ್ಪ ತಾಲೂಕಿನ ತುಮಖಾನೆಯವರು, ಎಫ್ ಕೆಸಿಸಿಐ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರಿನ ಜ್ಞಾನಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕರಾದ್ದಾರೆ. ಕಳೆದ 50 ವರ್ಷಗಳಿಂದ ಮೈಸೂರಿನಲ್ಲಿ ಸೇವೆ ಸಲ್ಲಿಸಿದ ಬಳಿಕ ಈಗ ತಮ್ಮೂರು ತುಮಖಾನೆಯಲ್ಲಿ ಅಮ್ಮ ಫೌಂಡೇಶನ್ ಎಂಬ ಸೇವಾ ಸಂಸ್ಥೆಯೊಂದನ್ನು ಹುಟ್ಟುಹಾಕಿ ಈ ಮೂಲಕ ಬಡ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಮಲೆನಾಡು ಭಾಗದ ಮುಖ್ಯ ಸಮಸ್ಯೆಯಾದ ನಿರುದ್ಯೋಗವನ್ನು ಗಮನದಲ್ಲಿಟ್ಟುಕೊಂಡು ಮಲೆನಾಡು ಭಾಗಕ್ಕೆ ‘ಸುಧಾಕರ್ ಎಸ್ ಶೆಟ್ಟಿ ಅರೇಕಾ & ಆಗ್ರೋ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪೆನಿಯೊಂದನ್ನು ತೆರೆದಿದ್ದು ಈ ಮೂಲಕ 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಕೇವಲ ಹಣ ಇದ್ದವರು ಶ್ರೀಮಂತರಾಗುವುದಿಲ್ಲ, ಹೃದಯ ಶ್ರೀಮಂತಿಕೆ ಮುಖ್ಯ ಎನ್ನುವುದನ್ನು ಸುಧಾಕರ್ ಎಸ್ ಶೆಟ್ಟಿ ಅವರು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.