ಬಾಗಲಕೋಟೆ: ಈ ಹಿಂದೆ ಚಿಕ್ಕಮಗಳೂರಿನಲ್ಲಿ ಬಾರ್ ನನ್ನು ಮುಚ್ಚಲು ಮಹಿಳೆಯರು ಪ್ರತಿಭಟನೆಯನ್ನು ನಡೆಸಿದ್ದರು ಅದೇ ರೀತಿಯಲ್ಲಿ ಮತ್ತೊಂದು ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾರ್ ಅಂಡ್ ರೆಸ್ಟೊರೆಂಟ್ ಗಳ ಸ್ಥಳಾಂತರಕ್ಕೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಚನಾಳ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ಮಹಿಳೆಯರು ತೀವ್ರವಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಚನಾಳ ಗ್ರಾಮದ ಬಳಿಯ ಕಿಂಗ್ಸ್ ಬಾರ್ ಸ್ಥಳಾಂತರಕ್ಕೆ ಒತ್ತಾಯಿಸಿ ಮಹಿಳೆಯರು ಬಾರ್ ಎದುರಿಗೆ ಅಡುಗೆಯನ್ನು ಮಾಡಿ, ಉಪಹಾರ ಸೇವಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಈ ಬಾರಿನಿಂದ ಗ್ರಾಮದಲ್ಲಿರುವಂತಹ ಅನೇಕ ಯುವಕರು ಹಾಳಾಗುತ್ತಿದ್ದಾರೆ. ಗ್ರಾಮದಲ್ಲಿ ವಾಸಿಸುತ್ತಿರುವಂತಹ ಪ್ರತಿ ಮನೆಗಳಲ್ಲಿ ನಿತ್ಯವೂ ಜಗಳವು ಶುರುವಾಗಿದೆ. ಮನೆಯಲ್ಲಿನ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ, ಮಾರಾಟ ಮಾಡಿ ಬಂದoತಹ ಹಣದಲ್ಲಿ ಕಂಠಪೂರ್ತಿ ಕುಡಿದುಕೊಂಡು ಬಂದು ಜಗಳಮಾಡುತ್ತಿದ್ದಾರೆ ನಮ್ಮ ಸಂಸಾರ ಬೀದಿಗೆ ಬರುತ್ತಿದೆ. ಹೀಗಾಗಿ ಬಾರ್ ನನ್ನು ಸ್ಥಳಾಂತರ ಮಾಡಿ. ಬಾರ್ ಸ್ಥಳಾಂತರ ಮಾಡುವವರೆಗೂ ಈ ಜಾಗವನ್ನು ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾನೀರತ ಮಹಿಳೆಯರು ತಿಳಿಸಿದ್ದಾರೆ.