ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಸೆಪ್ಟೆಂಬರ್ 27 ರಂದು ಕರ್ನಾಟಕ ಬಂದ್ ಗೆ ಕರೆಯನ್ನು ನೀಡಲಾಗಿದೆ. ರೈತ ವಿರೋಧಿ ಕಾಯ್ದೆಯನ್ನು ಹಿಂದೆ ಪಡೆಯುವ ಕಾರ್ಯ ಆಗುವವರೆಗೂ ಹೋರಾಟವನ್ನು ಮುಂದುವರೆಸಲಾಗುವುದು ಎಂದು ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತೀಯ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27 ರಂದು ಭಾರತ ಬಂದ್ ಗೆ ಕರೆಯನ್ನು ನೀಡಿದೆ. ಇದನ್ನು ಬೆಂಬಲಿಸಿ ರಾಜ್ಯದಲ್ಲಿ ರೈತ ಸಂಘಟನೆಗಳು ಕರ್ನಾಟಕ ಬಂದ್ ಮಾಡಬೇಕೆಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 27ರಂದು ರಾಜ್ಯದಲ್ಲಿ ಸಂಪೂರ್ಣ ಬಂದ್ ಆಚರಿಸಬೇಕು. ಎಲ್ಲ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಅಂಗಡಿ ಮುಂಗಟ್ಟು ಬಂದ್ ಆಗಬೇಕೆಂದು ಅವರು ಹೇಳಿದ್ದು, ಬಂದ್ ಯಶಸ್ಸಿಗಾಗಿ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಚರ್ಚೆಯನ್ನು ನಡೆಸಿ ಬೆಂಬಲ ಕೋರಲಾಗುವುದು ಎಂದು ತಿಳಿಸಿದ್ದಾರೆ.