ಕಾಬೂಲ್: ತಾವು ಯಾರ ವಿರುದ್ಧವೂ ದ್ವೇಷ ಸಾಧಿಸುವುದಿಲ್ಲ. ಎಲ್ಲರನ್ನೂ ಕ್ಷಮಿಸುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದ ತಾಲಿಬಾನ್ ನಾಯಕರು ತಮ್ಮ ಮಾತಿಗೆ ವಿರುದ್ಧವಾಗಿ ದೇಶಾದ್ಯಂತ ಪ್ರತಿಕಾರದ ಕ್ರಮಗಳಿಗೆ ಮುಂದಾಗಿದ್ದಾರೆ.
ಈ ಮೊದಲು ವಿಶ್ವಸಂಸ್ಥೆ ಹಾಗೂ ನ್ಯಾಟೋ ಪಡೆಗಳ ಜತೆ ಕೆಲಸ ಮಾಡಿದ್ದ ಆಫ್ಘಾನಿಸ್ತಾನದ ಪ್ರಜೆಗಳು ಹಾಗೂ ಅಧಿಕಾರಿಗಳನ್ನು ಪತ್ತೆಹಚ್ಚಲು ಮನೆ ಮನೆಯನ್ನೂ ಶೋಧಿಸಲಾಗುತ್ತಿದೆ. ಬಂಧಿತ ಅಥವಾ ವಶಕ್ಕೆ ಪಡೆಯಲಾದ ವ್ಯಕ್ತಿಗಳ ಮಾಹಿತಿಯನ್ನು ನೀಡದೆ ಉದ್ದಟತನವನ್ನು ಪ್ರದರ್ಶಿಸಲಾಗುತ್ತಿದೆ.
ಆಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳು ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಅಂತಾರಾಷ್ಟ್ರೀಯ ಸಮುದಾಯ ಅಸಹಾಯಕತೆಯಿಂದ ನೋಡುವಂತಾಗಿದೆ. ಈ ನಡುವೆ ಪ್ರಭಾವಿ ರಾಷ್ಟ್ರಗಳು ತಮ್ಮ ದೇಶದ ಪ್ರಜೆಗಳನ್ನು ಆಫ್ಘಾನಿಸ್ತಾನದಿಂದ ಸ್ಥಳಾಂತರಿಸುವ ಪ್ರಯತ್ನವನ್ನು ಮುಂದುವರೆಸಿವೆ. ತಾಲಿಬಾನಿಗಳ ವಿರೋಧದ ನಡುವೆಯೂ ಕೂಡ ತಮ್ಮದೇ ಆದ ಶೈಲಿಯಲ್ಲಿ ಕಾರ್ಯಾಚರಣೆ ಕೈಗೊಂಡು ಆಸ್ಟ್ರೇಲಿಯಾ ಸುಮಾರು 160 ಕ್ಕೂ ಹೆಚ್ಚು ಪ್ರಜೆಗಳನ್ನು ವಿಶೇಷ ವಿಮಾನದ ಮೂಲಕ ಕರೆದೊಯ್ದಿದೆ. ಅದರಲ್ಲಿ ಕೆಲವು ಆಫ್ಘನ್ ಪ್ರಜೆಗಳನ್ನೂ ಕೂಡ ಸ್ಥಳಾಂತರಿಸಲಾಗಿದೆ.
ಇನ್ನೂ 18 ಸಾವಿರ ಮಂದಿ ಕಾಬೂಲ್‌ನಲ್ಲಿದ್ದು, ಅವರುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಪ್ರಯತ್ನಗಳು ನಡೆಯುತ್ತಿವೆ. ಅಮೆರಿಕ ಪ್ರಜೆಗಳ ಸ್ಥಳಾಂತರ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ ವಿನಾಶಕಾರಿ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಹೊರತಾಗಿಯೂ ಕೂಡ ತಾಲಿಬಾನಿಗಳು ಅಡ್ಡಿಪಡಿಸುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಕಾಬೂಲ್‌ನ ವಿಮಾನ ನಿಲ್ದಾಣ ವಿಮಾನಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಈ ನಡುವೆ ಶುಕ್ರವಾರದ ಪ್ರಾರ್ಥನೆಯಲ್ಲಿ ಎಲ್ಲಾ ಮಸೀದಿಗಳಲ್ಲೂ ಏಕತೆಯನ್ನು ಸಾಧಿಸುವಂತೆ ಮುಲ್ಲಾಗಳು ಆಫ್ಘಾನ್ ಪ್ರಜೆಗಳಿಗೆ ಸಂದೇಶವನ್ನು ರವಾನಿಸಿದ್ದಾರೆ. ದೇಶ ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿದ ಬಳಿಕ ಇಂದು ಶುಕ್ರವಾರದ ಮೊದಲ ಪ್ರಾರ್ಥನೆಯಲ್ಲಿ ಮುಲ್ಲಾಗಳು ಒಗ್ಗಟ್ಟು ಪ್ರದರ್ಶನಕ್ಕೆ ಕರೆ ನೀಡಿರುವುದು ಗಮನಾರ್ಹವಾಗಿದೆ.
1919ರಲ್ಲಿ ಆಫ್ಘಾನಿಸ್ತಾನ ಬ್ರಿಟೀಷರ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರಗಳಿಸಿತ್ತು. ಈಗ ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿದೆ. ಆಫ್ಘನ್ ಪ್ರಜೆಗಳು ನಮ್ಮ ಧ್ವಜ ನಮ್ಮ ಏಕತೆ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಎಲ್ಲೆಡೆ ಪ್ರತಿಭಟನೆಗಳು ಆರಂಭಗೊoಡಿದ್ದು, ಕೆಲವು ಕಡೆ ತಾಲಿಬಾನಿಗಳು ಗುಂಡು ಹಾರಿಸಿ ಬೆದರಿಸಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.
ತಾಲಿಬಾನಿಗಳು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆಫ್ಘನ್ ಧ್ವಜವನ್ನು ತೆರವು ಮಾಡಿ ತಮ್ಮ ಧ್ವಜವನ್ನು ಹಾರಿಸಿದ್ದಾರೆ. ಇದು ಪ್ರತಿಭಟನೆಗೆ ಕಾರಣವಾಗಿದೆ. ಸರ್ಕಾರ ರಚನೆ ಪ್ರಕ್ರಿಯೆಗಳು ಇನ್ನು ಚರ್ಚೆಯ ಹಂತದಲ್ಲಿದ್ದು, ಆಂತರಿಕ ಬಂಡಾಯದಿoದಾಗಿ ನಿರ್ದಿಷ್ಟ ಸ್ವರೂಪ ಪಡೆದಿಲ್ಲ. ಆದರೆ, ಮೇಲ್ನೋಟಕ್ಕೆ ಇನ್ನು ಮುಂದೆ ಆಫ್ಘಾನಿಸ್ತಾನದಲ್ಲಿ ಶರಿಯತ್ ಕಾನೂನುಗಳು ಜಾರಿಯಲ್ಲಿರಲಿವೆ ಎಂದು ಘೋಷಿಸಲಾಗಿದೆ.
ದೇಶದಲ್ಲಿ ವಾಸಿಸುವ ಎಲ್ಲರೂ ಶರಿಯತ್ ಕಾನೂನಿಗೆ ಬದ್ಧವಾಗಿರಬೇಕು. ಅದನ್ನು ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿ ಪಡಿಸುವುದಾಗಿ ತಾಲಿಬಾನಿಗಳು ಹೇಳಿದ್ದಾರೆ. ತಾಲಿಬಾನಿಗಳು ಮಾಧ್ಯಮಗಳ ಸ್ವತಂತ್ರ ಕಾರ್ಯ ನಿರ್ವಹಣೆಗೆ ಅಡ್ಡಿಪಡಿಸಲಾರಂಭಿಸಿದ್ದಾರೆ. ಟಿವಿ ಹಾಗೂ ಮುದ್ರಣ ಮಾಧ್ಯಮದವರು ತಾಲಿಬಾನ್ ವಿರುದ್ಧ ಸುದ್ದಿಗಳನ್ನು ಪ್ರಕಟಿಸುವುದು ಚರ್ಚಿಸುವುದನ್ನು ನಿರ್ಬಂಧಿಸಲಾಗಿದೆ. ಕೆಲವು ಕಡೆ ಪತ್ರಕರ್ತರ ಮೇಲೆ ದಾಳಿಗಳು ನಡೆದಿವೆ.