ಧಾರವಾಡ: ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರ ಸಂಘಟನೆ ವಶಕ್ಕೆ ಪಡೆದಿರುವುದು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ಘಾನಿಸ್ತಾನದ ವಿದ್ಯಾರ್ಥಿಗಳ ಕಣ್ಣೀರಿಗೆ ಕಾರಣವಾಗಿದೆ.
ಭಾರತಕ್ಕೂ ಆಪ್ಘನ್‌ನ ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಗಮಿಸಿದ್ದು, ಅವರ ಪೈಕಿ ವಿದ್ಯಾಕಾಶಿ ಧಾರವಾಡದಲ್ಲಿ 15 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಹಾಗೂ ಸ್ನಾತಕೋತ್ತರ ಪದವಿ ಓದಲು ಬಂದಿರುವ ವಿದ್ಯಾರ್ಥಿಗಳು ಇವರಾಗಿದ್ದು ತಮ್ಮ ತಾಯ್ನಾಡಿಗೆ ಒದಗಿದ ದುಸ್ಥಿತಿ ನೆನೆದು ಕಂಬನಿ ಸುರಿಸುತ್ತಿದ್ದಾರೆ. ಕೊವಿಡ್ ಸೋಂಕಿನ ಹೆಚ್ಚಳದಿಂದ ತರಗತಿಗಳು ನಡೆಯದ ಕಾರಣ 15 ರಲ್ಲಿ 5 ವಿದ್ಯಾರ್ಥಿಗಳು ಮರಳಿ ಅಪ್ಘಾನಿಸ್ತಾನಕ್ಕೆ ತೆರಳಿದ್ದರು. ಉಳಿದ 10 ವಿದ್ಯಾರ್ಥಿಗಳು ಧಾರವಾಡ ಕೃಷಿ ವಿವಿ ಹಾಸ್ಟೆಲಿ ನಲ್ಲಿಯೇ ತಂಗಿದ್ದರು.
ಕುಟುoಬದ ಜೊತೆ ಮಾತನಾಡಿದ್ದೇವೆ. ಅವರು ಸುರಕ್ಷಿತವಾಗಿರೋದಾಗಿ ಹೇಳಿದ್ದಾರೆ. ತಾಲಿಬಾನ್ ಯಾರಿಗೂ ಏನೂ ಮಾಡಲ್ಲ ಎಂದು ಘೋಷಿಸಿದೆ. ಹೀಗಾಗಿ ನಾವು ಸ್ವಲ್ಪ ನಿರಾಳವಾಗಿದ್ದೇವೆ. ವಾಪಸ್ ಹೋದ 5 ವಿದ್ಯಾರ್ಥಿಗಳು ಭಾರತಕ್ಕೆ ಮರಳುವುದು ಕಷ್ಟ. ಸದ್ಯ ವಿಮಾನ ಸಂಚಾರ ಬಂದ್ ಆಗಿವೆ. ತುಂಬಾ ಭಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ಸುದ್ದಿ ಮಾಧ್ಯಮದೊಂದಿಗೆ ತಮ್ಮ ಅಳಲು ಹೇಳಿಕೊಂಡಿದ್ದಾರೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲಿಬಾನ್ ವಶಕ್ಕೆ ಒಳಪಟ್ಟಿದ್ದರಿಂದ ರಕ್ತಪಾತವನ್ನು ತಡೆಯುವ ಸಲುವಾಗಿ ಅಫ್ಘಾನಿಸ್ತಾನವನ್ನು ತೊರೆದಿದ್ದಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.
ಅಫ್ಘಾನಿಸ್ತಾನದಿಂದ ಪಲಾಯನವಾದ ಬಳಿಕ ಫೇಸ್‌ಬುಕ್ ನಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅಶ್ರಫ್ ಘನಿ, ಇಂದಿನಿoದ ಅಫ್ಘಾನಿಸ್ತಾನದ ಜನರ ರಕ್ಷಣೆ, ಗೌರವ ಮತ್ತು ಸಂಪತ್ತಿನ ಹೊಣೆಯನ್ನು ತಾಲಿಬಾನ್ ಹೊರಲಿದೆ ಎಂದು ಹೇಳಿದ್ದಾರೆ. ಈಗ ಅವರು ಆ ದೇಶದ ಜನರ ಗೌರವ, ಸಂಪತ್ತು ಮತ್ತು ಸ್ವಾಭಿಮಾನವನ್ನು ರಕ್ಷಿಸುವ ಹೊಣೆಯನ್ನು ಹೊತ್ತಿದ್ದಾರೆ. ಒಂದು ವೇಳೆ ನಾನು ದೇಶವನ್ನು ತೊರೆಯದಿದ್ದರೆ 6 ಮಿಲಿಯನ್ ಜನರ ಪ್ರಾಣಕ್ಕೆ ಸಂಚಕಾರ ಎದುರಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.