ಬೆಂಗಳೂರು: ಅಭಿವೃದ್ಧಿಪರ ಆಡಳಿತವನ್ನು ನೀಡಲು ವಿಫಲವಾಗಿರುವ ಹಾಗೂ ಸದಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ರಾಜ್ಯವನ್ನು ಕಾಪಾಡಲು ಆಮ್ ಆದ್ಮಿ ಪಾರ್ಟಿಯ ಅವಶ್ಯಕತೆ ರಾಜ್ಯಕ್ಕಿದೆ ಹಾಗಾಗಿ ಎಎಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಖ್ಯಾತ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಕೆ.ಎನ್.ಜಗದೀಶ್ ಮಹಾದೇವ್‍ರವರು ಹೇಳಿದರು.
ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸಮಾರಂಭದಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸುಮಾರು ಹತ್ತು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಕಾನೂನಾತ್ಮಕ ಹೋರಾಟವನ್ನು ಮಾಡುತ್ತಿದ್ದೇನೆ. ಇದಕ್ಕಾಗಿ ದೊಡ್ಡದೊಡ್ಡ ರಾಜಕಾರಣಿಗಳನ್ನು ಎದುರು ಹಾಕಿಕೊಂಡು ಮುನ್ನಡೆಯುತ್ತಿದ್ದೇನೆ. ಅನೇಕ ಸಂದರ್ಭಗಳಲ್ಲಿ ಕಾರ್ಮಿಕರು, ರೈತರು ಹಾಗೂ ಯುವಜನತೆಯ ನ್ಯಾಯಯುತ ಹೋರಾಟಕ್ಕೆ ಬೆಂಬಲವಾಗಿ ನಿಂತ ತೃಪ್ತಿಯಿದೆ. ನನ್ನಂತೆಯೇ ಎಎಪಿ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದು, ಪಕ್ಷ ಸೇರ್ಪಡೆಯಿಂದ ನನ್ನ ಹೋರಾಟದ ಶಕ್ತಿ ಹೆಚ್ಚಾಗಲಿದೆ. ಪಕ್ಷಕ್ಕೂ ನನ್ನಿಂದ ಅನುಕೂಲವಾಗುವ ದೃಢ ವಿಶ್ವಾಸವಿದೆ ಎಂದು ಹೇಳಿದರು.
ದೆಹಲಿಯ ಕೇಜ್ರಿವಾಲ್ ಸರ್ಕಾರವು ಜನಪರ ಆಡಳಿತವನ್ನು ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ದೇಶದಲ್ಲಿ ಜನವಿರೋಧಿ ಆಡಳಿತವನ್ನು ನೀಡುತ್ತಿದೆ. ಕೇಜ್ರಿವಾಲ್ ಆಡಳಿತದಲ್ಲಿ ಕುಡಿಯುವ ನೀರು, ವಿದ್ಯುತ್, ವೈದ್ಯಕೀಯ ಸೌಲಭ್ಯ ಮುಂತಾದವುಗಳು ಒಂದು ಮಿತಿಯವರೆಗೆ ಉಚಿತವಾಗಿ ಸಿಗುತ್ತಿದೆ. ಆದರೆ ಮೋದಿ ಸರ್ಕಾರವು ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆಯನ್ನು ಮನಬಂದಂತೆ ಹೆಚ್ಚಿಸುವ ಮೂಲಕ ಸಾಮಾನ್ಯ ಜನರನ್ನು ಹೈರಾಣಾಗಿಸುತ್ತಿದೆ. ಇದರ ವಿರುದ್ಧ ಹೋರಾಡಲು ಯುವಜನತೆ ಮುಂದಾಗಬೇಕು. ಭ್ರಷ್ಟ ಹಾಗೂ ಕೋಮುವಾದಿ ನಾಯಕರುಗಳೇ ತುಂಬಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಪ್ರತಿಜ್ಞೆಯನ್ನು ಮಾಡಬೇಕು ಎಂದು ಕೆ.ಎನ್.ಜಗದೀಶ್ ಹೇಳಿದರು.
ವಕೀಲ್ ಸಾಬ್ ಎಂದೇ ಕರೆಯುವ ಎನ್.ಜಗದೀಶ್‍ರವರು ಸಾಮಾನ್ಯ ಜನರಿಗಾಗಿ ಧೈರ್ಯದಿಂದ ಹೋರಾಡಿ ರಾಜ್ಯಾದ್ಯಂತ ಜನರ ಹೃದಯವನ್ನು ಗೆದ್ದಿದ್ದಾರೆ ಇವರ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಕೆ.ಎನ್. ಜಗದೀಶ್‍ರವರಿಗೆ ಅನೇಕ ಹಿತೈಷಿಗಳು ಮತ್ತು ಅಪಾರ ಅನುಯಾಯಿಗಳಿರುವುದರಿಂದ ಪಕ್ಷದ ಸಂದೇಶವನ್ನು ನಮ್ಮ ರಾಜ್ಯದ ಮೂಲೆಮೂಲೆಗೂ ತಲುಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯಲ್ಲಿ ಬೆಂಗಳೂರು ನಗರದ ಅಧ್ಯಕ್ಷ ಮೋಹನ್ ದಾಸರಿ, ಹಿರಿಯ ಮುಖಂಡರಾದ ಲಕ್ಷ್ಮೀಕಾಂತ್ ರಾವ್, ನಂಜಪ್ಪ ಕಾಳೇಗೌಡ, ಕುಶಲಸ್ವಾಮಿ, ಉಷಾ ಮೋಹನ್, ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ಜಗದೀಶ್ ವಿ. ಸದಂ ಹಾಗೂ ಇತರೆ ಮುಖಂಡರು ಮತ್ತು ಕೆ.ಎನ್.ಜಗದೀಶ್‍ರವರ ಅಪಾರ ಸಂಖ್ಯೆಯ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.