ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ನೀರಿನಲ್ಲಿ ಆಟವಾಡುವಾಗ ಆಯತಪ್ಪಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ನಡೆದಿದೆ.
ರಜೆಯ ವೇಳೆ ಸಂಬಂಧಿಯ ಮನೆಗೆ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಮೃತರನ್ನು ರವಿ (31) ಅನನ್ಯ (17) ಶಾಮವೇಣಿ (16) ಎಂದು ಗುರುತಿಸಲಾಗಿದೆ. ರವಿ ಮೂಲತಃ ಲಕ್ಕವಳ್ಳಿ ನಿವಾಸಿ. ಅನನ್ಯ ಮತ್ತು ಶಾಮವೇಣಿ ರವಿಯ ಸಹೋದರಿಯರ ಮಕ್ಕಳು ರಜೆಗೆಂದು ರವಿಯ ಮನೆಗಾಗಿ ಬಂದಿದ್ದರು. ಈ ವೇಳೆ ತರೀಕೆರೆಯ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಆಯತಪ್ಪಿ ಬಿದ್ದಿದ್ದಾರೆ. ಇಬ್ಬರನ್ನು ರಕ್ಷಿಸಲು ಹೋಗಿ ರವಿಯೂ ಪ್ರಾಣ ಕಳೆದುಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಿಗೆರೆ: ಕಾಫಿನಾಡಲ್ಲಿ ಮೊದಲ ಬಲಿ ಪಡೆದುಕೊಂಡ ಮಳೆರಾಯ; ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವು
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ 21-ಮೇ-2023) 2023ರ ಮಳೆರಾಯ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಬಲಿಯನ್ನು ಪಡೆದುಕೊಂಡಿದೆ.
ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ಹೆಸಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ಬೋರ್ಡ್ ಸಮೀಪ ಸಂಚರಿಸುತ್ತಿದ್ದ ಬೈಕ್ ಮೇಲೆ ಮರವೊಂದು ಬಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ವೇಣುಗೋಪಾಲ್ (45) ಎಂದು ಗುರುತಿಸಲಾಗಿದೆ. ಇಂದು ಮೂಡಿಗೆರೆ ವ್ಯಾಪ್ತಿಯಲ್ಲಿ ವರಣರಾಯನ ಹೊಡೆತಕ್ಕೆ ಒಂದರ ಹಿಂದೆ ಒಂದರಂತೆ ಏಕಕಾಲಕ್ಕೆ ಮೂರು ಮರಗಳು ಧರೆಗುರುಳಿವೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಣುಗೋಪಾಲ್ ಮೇಲೆ ಮರ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವೇಣುಗೋಪಾಲ್ ತಮ್ಮ ಕುಟುಂಬದೊಂದಿಗೆ ಹಲವಾರು ವರ್ಷದಿಂದ ವಾಸವಿದ್ದರು. ಮೂಡಿಗೆರೆಯಲ್ಲಿ ಖಾಸಗಿ ಹೋಂ ಸ್ಟೇ ಜೊತೆಗೆ ಬಳೆ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಹೋಂ ಸ್ಟೇ ಸಮೀಪವೇ ಮರ ಅವರ ಸ್ಕೂಟಿ ಮೇಲೆ ಬಿದ್ದಿದ್ದು ಒಂದು ನಿಮಿಷ ವ್ಯತ್ಯಾಸವಾಗಿದ್ದರು ವೇಣುಗೋಪಾಲ್ ಬಚಾವಾಗುತ್ತಿದ್ದರು. ಆದರೆ ವಿಧಿ ಅವರನ್ನು ಬಲಿಪಡೆದುಕೊಂಡಿದೆ. ಈ ಕುರಿತು ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.