Friday, June 9, 2023
Homeರಾಜ್ಯ18 ವರ್ಷ ಮೇಲ್ಪಟ್ಟವರಿಗೆ ಮೇ 1ಕ್ಕೆ ಕೊರೋನಾ ಲಸಿಕೆ ಇಲ್ಲ

18 ವರ್ಷ ಮೇಲ್ಪಟ್ಟವರಿಗೆ ಮೇ 1ಕ್ಕೆ ಕೊರೋನಾ ಲಸಿಕೆ ಇಲ್ಲ

ಲಸಿಕೆ ಕೊರತೆಯ ಕಾರಣದಿಂದ 18 ವರ್ಷ ಮೇಲ್ಪಟ್ಟವರಿಗೆ ಮೇ 1ಕ್ಕೆ ಕೊರೋನಾ ಲಸಿಕೆ ಅಭಿಯಾನ ಆರಂಭವಾಗುತ್ತಿಲ್ಲ, ಆದಕಾರಣ ಯಾರೂ ಸಹ ಲಸಿಕೆಗಾಗಿ ಆಸ್ಪತ್ರೆಗೆ ಹೋಗಬೇಡಿ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಪ್ರಕಟಣೆಯಂತೆ ನಾಳೆ ಅಂದರೆ ಮೇ 1ಕ್ಕೆ 18 ವರ್ಷ ಮೇಲ್ಪಟ್ಟವರಿಗೆ ರಾಜ್ಯದಲ್ಲಿ ಸಾಮೂಹಿಕ ಕೊರೋನಾ ಲಸಿಕೆ ಅಭಿಯಾನವನ್ನು ಆರಂಭಿಸಬೇಕಿತ್ತು ಆದರೆ ಅದು ನಾಳೆಗೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ಯಾರೂ ಆಸ್ಪತ್ರೆಗಳಿಗಾಗಲಿ, ಲಸಿಕಾ ಕೇಂದ್ರಗಳ ಬಳಿಯಾಗಲೀ ಹೋಗಬೇಡಿ ಎಂದುಕರ್ನಾಟಕ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಘೋಷಿಸಿರುವಂತೆ 18 ವರ್ಷದಿಂದ 45 ವರ್ಷದೊಳಗಿನವರಿಗೆ ಮೇ 1ರಿಂದ ಲಸಿಕೆ ನೀಡುವ ಅಭಿಯಾನ ಆರಂಭವಾಗಬೇಕಿತ್ತು. ಅದರ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸುಮಾರು 3ರಿಂದ 3.5 ಕೋಟಿ ಜನರು ಫಲಾನುಭವಿಗಳಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಈಗಾಗಲೇ ಸರ್ಕಾರ 400 ಕೋಟಿ ರೂಪಾಯಿಗಳನ್ನು ಲಸಿಕೆ ತಯಾರಿಕಾ ಕಂಪೆನಿ ಸೆರಂ ಇನ್ಸ್ಟಿಟ್ಯೂಟ್ ಗೆ ನೀಡಿ 1 ಕೋಟಿ ಡೋಸ್ ಗೆ ಆರ್ಡರ್ ನೀಡಿದೆ. ಭಾರತ್ ಬಯೋಟೆಕ್ ಕಂಪೆನಿ ಹಾಗೂ ರಷ್ಯಾ ಮೂಲದ ಕಂಪೆನಿಯನ್ನು ಸಹ ಸಂಪರ್ಕಿಸಿದ್ದು ಅವರಿಂದ ಇನ್ನೂ ಅಧಿಕೃತವಾಗಿ ಮಾಹಿತಿ ಬಂದಿಲ್ಲ ಎಂದು ಹೇಳಿದರು.

ಕಂಪೆನಿ ಕಡೆಯಿಂದ ಯಾವಾಗ ಲಸಿಕೆ ಬರುತ್ತದೆ ಎಂದು ಸರ್ಕಾರಕ್ಕೆ ಈ ತಕ್ಷಣಕ್ಕೆ ಅಂದಾಜು ಮಾಡಲು ಸಾಧ್ಯವಿಲ್ಲ, ಹಾಗಾಗಿ ಎಷ್ಟು ವಾರಗಳಾಗಬಹುದು ಎಂದೂ ಈಗಲೇ ನಾವು ಹೇಳಲಾಗುವುದಿಲ್ಲ. ಆದಷ್ಟು ಶೀಘ್ರ ಲಸಿಕೆ ತರಿಸುವ ಸರ್ಕಾರದ ಪ್ರಯತ್ನ ಮಾಡಲಾಗುತ್ತದೆ. ಜನರಿಗೆ ಆದಷ್ಟು ಬೇಗನೇ ಲಸಿಕೆ ನೀಡುವುದು ಸರ್ಕಾರದ ಧ್ಯೇಯ ಕೂಡ ಆಗಿದೆ ಎಂದರು.

18 ವರ್ಷದಿಂದ 45 ವರ್ಷದೊಳಗಿನವರಿಗೆ ರಾಜ್ಯದ ಜನತೆಗೆ ಸರ್ಕಾರ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವುದು ಖಂಡಿತ. ಇದರಲ್ಲಿ ಯಾವುದೇ ಗೊಂದಲ ಬೇಡ. ಕೋವಿಡ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಬಹುದು, ಅದೇ ರೀತಿ 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳದವರು ಆಸ್ಪತ್ರೆಗಳಿಗೆ ಹೋಗಿ ಕೂಡಲೇ ಲಸಿಕೆ ಹಾಕಿಸಿಕೊಳ್ಳಿ ಅವರಿಗೆ ಯಾವುದೇ ಲಸಿಕೆಯ ಕೊರತೆ ಇರುವುದಿಲ್ಲ ಎಂದು ಸಚಿವರು ಮನವಿ ಮಾಡಿಕೊಂಡರು.

ಲಸಿಕೆ ಕಂಪನಿಯಾದ ಸೆರಂ ಸಂಸ್ಥೆಯಿಂದ ಖಚಿತ ಮಾಹಿತಿ ಬಂದ ಕೂಡಲೇ ರಾಜ್ಯದ ಜನತೆಗೆ 18 ವರ್ಷ ಮೇಲ್ಪಟ್ಟವರಿಗೆ ಯಾವಾಗ ಲಸಿಕೆ ಅಭಿಯಾನ ಆರಂಭವಾಗುತ್ತದೆ ಎಂದು ಸರ್ಕಾರದ ವತಿಯಿಂದ ತಿಳಿಸುತ್ತೇವೆ ಎಂದರು.

ಈಗಾಗಲೇ ಕಂಪೆನಿಗಳಿಂದ ಕರ್ನಾಟಕಕ್ಕೆ 99 ಲಕ್ಷ ಡೋಸ್ ಲಸಿಕೆಗಳು ಬಂದಿದ್ದು, 95 ಲಕ್ಷ ಡೋಸ್ ಲಸಿಕೆಗಳನ್ನು ಜನರಿಗೆ ನೀಡಿದ್ದೇವೆ. ಕೇಂದ್ರ ಸರ್ಕಾರ ಬಳಿ ಕೂಡ ದಿನನಿತ್ಯ ಲಸಿಕೆಗಳನ್ನು ಹೆಚ್ಚಿನ ಮಟ್ಟದಲ್ಲಿ ಬೇಗನೆ ಪೂರೈಸುವಂತೆ ಮನವಿ ಮಾಡಿಕೊಳ್ಳುತ್ತೇವೆ, ಸರ್ಕಾರದ ವ್ಯವಸ್ಥೆಗಳಲ್ಲಿ ಲೋಪದೋಷಗಳಿಲ್ಲ, ಯಾರೂ ಕೂಡ ತಪ್ಪು ಭಾವಿಸಬೇಡಿ, ಸದ್ಯದ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ನಾಗರಿಕರು ಕೋವಿಡ್ ಮಾರ್ಗಸೂಚಿಗಳನ್ನು ಶಿಸ್ತುಬದ್ಧವಾಗಿ ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಚಿವ ಡಾ. ಕೆ ಸುಧಾಕರ್ ಮನವಿ ಮಾಡಿಕೊಂಡರು.

Most Popular

Recent Comments