ಬೆಂಗಳೂರು: ಕಳೆದ 3 ವರ್ಷಗಳಲ್ಲಿ ಹಲವಾರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿರುವ ವೈದ್ಯೆ ಡಾ. ಅನುರಾಧಾ ಅವರು ಕೆಲ ತಿಂಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು . ಇದು ಅವರ ಶ್ವಾಸಕೋಶದ ಮೇಲೆ ಸಹ ಪರಿಣಾಮ ಬೀರಿತ್ತು, ಆದರೆ ಸೋಂಕಿನಿಂದ ಚೇತರಿಸಿಕೊಳ್ಳಲು ಕೆಲ ಸಮಯ ತೆಗೆದುಕೊಂಡರೂ ಸಹ ಇದೀಗ ಮತ್ತೆ ಡಾ. ಅನುರಾಧ ಅವರು ತರಬೇತಿ ಪ್ರಾರಂಭಿಸಿದರು. ತಮ್ಮ ದೃಢ ನಿರ್ಧಾರದ ಮೂಲಕ , ಇತ್ತೀಚೆಗೆ ನಡೆದ 87.15 ಕಿ.ಮೀ ವ್ಯಾಪ್ತಿ, 12 ಗಂಟೆಗಳ ಸ್ಟೇಡಿಯಂ ರೇಸ್ ಪೂರ್ಣಗೊಳಿಸಿ 2ನೇ ಸ್ಥಾನವನ್ನು ಗಳಿಸಿದರು.
ಖಾಸಗೀ ಆಸ್ಪತ್ರೆಯಲ್ಲಿ ಉದ್ಯೋಗ ಮಾಡುತ್ತಿರುವ ಡಾ.ಅನುರಾಧಾಗೆ ಕಳೆದ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿ 2ನೇ ದಿನ, ಅವರ ದೇಹದಲ್ಲಿ ಆಮ್ಲಜನಕದ ಮಟ್ಟವು ಕಡಿಮೆಯಾಗಲು ಪ್ರಾರಂಭವಾಯಿತು, ಮತ್ತು ಅವರಿಗೆ ತೀವ್ರವಾದ ಕೆಮ್ಮಿನ ಸಮಸ್ಯೆ ಕಾಣಿಸಿಕೊಂಡಿತ್ತು. ಆರೋಗ್ಯ ಹದಗೆಟ್ಟು ನಡೆಯಲೂ ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದರು, ಅವರ ಸಿಟಿ ಸ್ಕ್ಯಾನ್ ನಲ್ಲಿ ನ್ಯುಮೋನಿಯಾ ಇರುವುದು ಸಹ ಸ್ಪಷ್ಟವಾಗಿತ್ತು. ಅದಕ್ಕಾಗಿ ಅವರಿಗೆ ಚಿಕಿತ್ಸೆಯನ್ನು ನೀಡಲಾಯಿತು, ಮುಂದಿನ.ಹತ್ತು ದಿನಗಳಲ್ಲಿ ಆಕೆ ಚೇತರಿಸಿಕೊಂಡರಾದರೂ ಕೆಲ ಆರೋಗ್ಯ ಸಮಸ್ಯೆಯ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅವರಿಗೆ ಪೂರ್ತಿ 2 ತಿಂಗಳುಗಳ ಕಾಲ ಬೇಕಾಯಿತು.. ನಂತರದಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಮನೆಯ ಸಮೀಪವೇ ವಾಕಿಂಗ್ ಮಾಡಲು ಪ್ರಾರಂಭಿಸಿದ್ದರು.ಮುಂದೆ ನಿಧಾನವಾಗಿ ಉದ್ಯಾನವನದಲ್ಲಿ ವಾಕಿಂಗ್ ಮಾಡಲು ಪ್ರಾರಂಭಿಸಿದರು.
ಪೂರ್ತಿ ಒಂದು ತಿಂಗಳು ತರಬೇತಿ ಪಡೆದ ಡಾ. ಅನುರಾಧಾ ಆ ನಂತರ ತನ್ನ ಮೊದಲ ಮ್ಯಾರಥಾನ್ನಲ್ಲಿ ಭಾಗವಹಿಸಿದರು.”ನಾನು ಮತ್ತೆ ಮ್ಯಾರಥಾನ್ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ನಾನು ಅದನ್ನು ಪೂರ್ಣಗೊಳಿಸಿದೆ. ನಾನು ಮತ್ತೆ ಓಡುತ್ತಿದ್ದೇನೆ ಎಂದು ನನಗೆ ತುಂಬಾ ಸಂತೋಷದ ಸಂಗತಿ. ನಾನು ಗೆಲ್ಲಲಿಕ್ಕಾಗಿ ಭಾಗವಹಿಸಿಲ್ಲ. ಬದಲಿಗೆ ನಾನೆಷ್ಟು ಆರೋಗ್ಯವಾಗಿದ್ದೇನೆ ಎಂದು ನೋಡಲು ಭಾಗವಹಿಸಿದ್ದೆ.” ಅವರು ಸಂತಸ ತೋರ್ಪಡಿಸಿಕೊಂಡರು.
ನನಗೆ ಓಡುವುದನ್ನು ಬಿಟ್ಟುಕೊಡಲು ಇಷ್ಟವಿರಲಿಲ್ಲ. ಅದು ನನ್ನ ಪ್ರೀತಿಯ ವಿಷಯವಾಗಿತ್ತು. ನಾನು ದೇಶಾದ್ಯಂತ 50 ಕ್ಕೂ ಹೆಚ್ಚು ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದೇನೆ. ನಾನು ಚಿಂತೆಗೀಡಾಗಿದ್ದರೂ ಕೆಲವು ಸಮಯಗಳಲ್ಲಿ ನನ್ನ ಶ್ವಾಸಕೋಶದ ಬಗ್ಗೆ ಯೋಚಿಸುವಾಗ ಭಯವಾಗುತ್ತಿತ್ತು.ನಾನು ಸಾವಿಗೀಡಾಗಬಹುದು ಎಂಬ ಭಯ ಸಹ ಆವರಿಸಿತ್ತು. ಆದರೆ ನಾನು ಓಟವನ್ನು ಬಿಟ್ಟುಕೊಡಲು ಬಯಸಿಲ್ಲ. – ಡಾ. ಅನುರಾಧಾ