ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 03/05/2021ರ ಸಂಜೆ 6 ಗಂಟೆಯ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಒಟ್ಟು 402 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ನೇಮಕಾತಿಯಲ್ಲಿ ಶೇ 2ರಷ್ಟು ಹುದ್ದೆಗಳನ್ನು (9) ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಮೀಸಲಿಡಲಾಗಿದೆ.
ಸೇವಾನಿರತ ಅಭ್ಯರ್ಥಿಗಳು ಸಹ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ಪೊಲೀಸ್ ಇಲಾಖೆಯ ಯಾವುದೇ ವೃಂದದಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್/ ಹೆಡ್ ಕಾನ್ಸ್‌ಟೇಬಲ್ / ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕನಿಷ್ಟ 5 ವರ್ಷಗಳ ಸೇವೆಯನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಪೂರ್ಣಗೊಳಿಸಿರಬೇಕು.
ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಸಹಿಷ್ಣುತೆ ಹಾಗೂ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ. ಲಿಖಿತ ಪರೀಕ್ಷೆ ಆಯ್ಕೆ ಸಮಿತಿ ನಿಗದಿಪಡಿಸಿದ ಕೇಂದ್ರಗಳಲ್ಲಿ ಮಾತ್ರ ನಡೆಯಲಿದೆ. ಆಯ್ಕೆ ಸಮಿತಿ ಯಾವುದೇ ಸಮಯದಲ್ಲಿ ಪರೀಕ್ಷಾ ಕೇಂದ್ರವನ್ನು ರದ್ದುಪಡಿಸುವ ಅಥವ ಹೊಸದಾಗಿ ಸೇರಿಸುವ ಹಕ್ಕನ್ನು ಹೊಂದಿರುತ್ತದೆ.
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 3/5/2021ಕ್ಕೆ ಅಭ್ಯರ್ಥಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು. ಈ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 32 ವರ್ಷ. ಇತರೆ ಅಭ್ಯರ್ಥಿಗಳಿಗೆ 30 ವರ್ಷಗಳು. ಸೇವಾನಿರತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 40 ವರ್ಷಗಳು. ಇತರೆ ಅಭ್ಯರ್ಥಿಗಳಿಗೆ 35 ವರ್ಷಗಳು.
ಯು.ಜಿ.ಸಿ. ಇಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವ ತತ್ಸಮಾನ ಪದವಿಯನ್ನು ನಿಗದಿಪಡಿಸಿರುವ ಕೊನೆಯ ದಿನಾಂಕ ಅಂದರೆ 3/5/2021ಕ್ಕೆ ಹೊಂದಿರಬೇಕು. ತತ್ಸಮಾನ ವಿದ್ಯಾರ್ಹತೆ ಎಂದರೆ ಯುಜಿಸಿಯಿಂಂದ ಮಾನ್ಯತೆ ಪಡೆದ ಪರಿಣಿತ ವಿವಿ, ಖಾಸಗಿ/ ಡೀಮ್ಡ್ ಹಾಗೂ ಹೊರ ರಾಜ್ಯದ ವಿಶ್ವವಿದ್ಯಾಲಯಗಳಿಂದ ಪಡೆದ ಪದವಿಗಳು
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಯಾವುದೇ ಕಾರಣಕ್ಕೂ ಅರ್ಜಿ ಶುಲ್ಕವನ್ನು ವಾಪಸ್ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಭ್ಯರ್ಥಿಯು ಶುಲ್ಕ ಪಾವತಿ ಬಳಿಕ ಸಿಗುವ ಚಲನ್ ಪ್ರತಿಯನ್ನು ಇಟ್ಟುಕೊಂಡಿರಬೇಕು.